ಸಂಜೆ ವೇಳೆಗೆ ತನ್ನ ಕೆಲಸ ಮುಗಿಸಿ ಮನೆಗೆ ಬಂದವಳನ್ನು ಮನೆ ಮುಂದೆ ನಿಂತು ಸ್ವಾಗತಿಸಿದ್ದು.... ಅಪರಿಚಿತ ವ್ಯಕ್ತಿ.....
ಯಾರಿವನು ?? ಎಂದು ಮನಸ್ಸಿನಲ್ಲಿ ಪ್ರಶ್ನಿಸಿ, ಮನೆಯೊಳಗೆ ಪ್ರವೇಶಿಸಿದಾಗ ಹುಣ್ಣಿಮೆ ಚಂದ್ರನಂತೆ ಹೊಳೆಯುತ್ತಿರುವ ತನ್ನ ತಾಯಿಯ ಮುಖವನ್ನು ಕಂಡ ಅರ್ಚನಾ ಳಿಗೆ... ತಾಯಿಯ ಪಕ್ಕದಲ್ಲಿದ್ದ ಮಧ್ಯ ವಯಸ್ಕ ಸ್ತ್ರೀಯನ್ನು ಕಂಡಾಗ .....ಅವರು ಬಂದಿರುವ ಉದ್ದೇಶವೇನೆಂದು ತಿಳಿಯಿತು....
_ಪುಟ್ಟ ಇವರು..._
_ನನಗೆ ಅರ್ಥ ಆಯಿತು ಅಮ್ಮ... ನನಗೆ ಮದುವೆ ಮಾಡುವ ಪ್ರಯತ್ನ ನಡೆಯುತ್ತಿದೆ.... ಹೊರಗಡೆ ನಿಂತಿರುವ ಅಪರಿಚಿತ ವ್ಯಕ್ತಿ ನನ್ನ ನೋಡಲು ಬಂದಿರುವ ಗಂಡು ಇರಬೇಕು ಅಲ್ವಾ_ ಎಂದವಳೇ ನೇರ ಆ ವ್ಯಕ್ತಿಯ ಬಳಿಗೆ ಹೋಗಿ, _ನೋಡಿ ಮಿಸ್ಟರ್... ನನಗೆ ಮೊದಲೇ ಮದುವೆಯಾಗಿದೆ... ನಾನೊಬ್ಬ ವಿಧವೆ.... ನನಗೆ ಮರು ಮದುವೆಯಾಗಲು ಇಷ್ಟ ಇಲ್ಲ... ದಯವಿಟ್ಟು ಇಲ್ಲಿಂದ ಹೊರಡಿ... _ ಎಂದು ತನ್ನ ಎರಡು ಕೈಗಳನ್ನು ಜೋಡಿಸಿ ಹೇಳಿದವಳೇ ತನ್ನ ಕೋಣೆಯೊಳಗೆ ಹೊಕ್ಕು ಬಾಗಿಲು ಹಾಕಿ... ಮಂಚದ ಮೇಲೆ ಕುಳಿತು ಅಳತೊಡಗಿದಳು.....
ಅತ್ತು ಅತ್ತು ಸುಸ್ತಾಗಿ... ನಂತರ ಫ್ರೆಶ್ ಆಗಿ ಬಂದವಳೇ, ಸ್ವಲ್ಪ ನೀರು ಕುಡಿದು.. ಪುಸ್ತಕವೊಂದನ್ನು ಹುಡುಕ ತೊಡಗಿದವಳಿಗೆ ಕಂಡದ್ದು... ತಾನು ವರುಷಗಳ ಹಿಂದೆ ಬರೆದ ಡಯರಿ... ಅದನ್ನು ಕೈಗೆತ್ತಿಕೊಂಡು ಬಾಲ್ಕನಿಗೆ ಹೋಗಿ ಅಲ್ಲಿ ಒಂದು ಕುರ್ಚಿಯಲ್ಲಿ ಕುಳಿತುಕೊಂಡು ಅದರ ಪುಟ ತಿರುಗಿಸಿದಳು...
೩ ವರುಷದ ಹಿಂದೆ...
"ಹಾಯ್ ಡಯರಿ... ಹೇಗಿದ್ಯಾ... ನನ್ನ ದಿನಚರಿ ನಿನ್ನ ಜೊತೆ ಹಂಚಿಕೊಳ್ಳದೇ ಇದ್ದರೆ ಅದು ಅಪೂರ್ಣ ಅನಿಸುತ್ತದೆ... ಇವತ್ತಿಗೆ ಪರೀಕ್ಷೆಗಳೆಲ್ಲಾ ಮುಗಿದವು.ಇನ್ನೂ ನಾನೊಬ್ಬ ಡಿಗ್ರಿ ಹೋಲ್ಡರ್ ಆಗುವೆ. ಅದೇ ಖುಷಿಗೆ ದಿವ್ಯ ಜೊತೆ ಎರಡು ಪ್ಲೇಟ್ ಪಾನಿಪುರಿ ತಿಂದೆ. ಎಷ್ಟು ಸಖತ್ತಾಗಿತ್ತು ಗೊತ್ತಾ...??? ಆಮೇಲೆ ಪಾರ್ಕ್ ಗೆ ಹೋಗಿ ಅಲ್ಲಿ ಪುಟ್ಟ ಮಕ್ಕಳ ಜೊತೆ ಆಟವಾಡಿ ಮನೆ ಮುಂದೆ ಕಾಲಿಟ್ಟಾಗ ಸಮಯ ೫ ಆಗಿತ್ತು.... ಇವತ್ತು ಅಮ್ಮನ ಕೈಯಿಂದ ಸಹಸ್ರ ನಾಮಾರ್ಚನೆ ಗ್ಯಾರಂಟಿ ಅನ್ಕೊಂಡು ಹೋದೆ... ಆದರೆ ಅಮ್ಮ ನನಗೋಸ್ಕರ ಕಾಯುತ್ತಾ ಮನೆ ಮುಂದೆ ನಿಂತಿದ್ದಳು...
ನನ್ನನ್ನು ಕಂಡದ್ದೇ ತಡ.... ನನ್ನ ಎಳ್ಕೊಂಡು ಹಿಂದುಗಡೆ ಬಾಗಿಲಿನಿಂದ ಮನೆಯೊಳಗೆ ಕರೆದುಕೊಂಡು ಹೋದಳು... ಅಮ್ಮ ಯಾಕೆ ವಿಚಿತ್ರವಾಗಿ ಆಡ್ತಿದ್ದಾಳೆ ಅನ್ಕೊಂಡು ಅವಳನ್ನೇ ನೋಡುತ್ತಿದ್ದೆ.... ಬೇಗ ಫ್ರೆಶ್ ಆಗಿ ಬರಲು ಹೇಳಿದಳು... ಅಂತೂ ಇಂತೂ ಬೈಗುಳ ತಪ್ಪಿತು ಅಂತ ಖುಷಿಗೆ ಹಾಡೊಂದನ್ನು ಗುನುಗುತ್ತಾ ಫ್ರೆಶ್ ಆಗಿ ಬಂದಾಗ, ನೇರಳೆ ಬಣ್ಣದ ಸೀರೆಯೊಂದನ್ನು ಕೈಗಿಟ್ಟು ಬೇಗ ರೆಡಿಯಾಗಿ ಬಾ ಅಂದ್ಲು... ನಾನು ಕೀಲಿ ಕೊಟ್ಟ ಗೊಂಬೆಯಂತೆ ಅಮ್ಮನ ಮಾತನ್ನು ಅಕ್ಷರಶಃ ಪಾಲಿಸಿದೆ....
ಆಮೇಲೆ ನನ್ನ ಟ್ಯೂಬ್ ಲೈಟ್ ತಲೆಗೆ ಹೊಳೆಯಿತು ಯಾವುದೋ ಬಲಿ ಕಾ ಬಕರಾ ಬಂದಿದ್ದಾನೆಂದು.... ಅದೇ ನನ್ನ ನೋಡೋಕೆ ಯಾರೋ ಬಂದಿದ್ದಾರೆ... ಎಂದಿನಂತೆ ಹುಡುಗನಿಗೆ ಕೊಡಬೇಕಾದ ಕಾಫಿಗೆ ಎರಡು ಚಮಚ ಉಪ್ಪು ಹಾಕಿ ನಗುಮುಖದೊಂದಿಗೆ ನಾಚುತ್ತಾ ಹೋದೆ....
ಎಲ್ಲರಿಗೂ ಕಾಫಿ ಕೊಟ್ಟು... ನಮ್ಮ ಭಾವಿ ಯಜಮಾನ್ರಿಗೆ ಅಚ್ಚೂಸ್ ಸ್ಪೆಷಲ್ ಕಾಫಿ ಕೊಟ್ಟೆ. ಮೆಲ್ಲ ತಲೆಯೆತ್ತಿ ಅವರ ಮುಖ ನೋಡಿದೆ... ನನ್ನ ನೋಡುತ್ತಾ ನಗುತ್ತಿದ್ದವರು ಕಾಫಿ ಕಪ್ ಕಡೆಗೆ ನೋಡಲು ಕಣ್ ಸನ್ನೆಮಾಡಿ ತೋರಿಸಿದರು... ನೋಡಿದಾಗ ಕಪ್ ಮೇಲ್ಗಡೆ ಸೈಡ್ ನಲ್ಲಿ ಉಪ್ಪು ಇತ್ತು.... ನಾನು ಸಿಕ್ಕಿ ಹಾಕೊಂಡೆ. ಕಾಪಾಡು ಗಣೇಶ ಎಂದು ಮನಸ್ಸಲ್ಲಿ ದೇವರಿಗೆ ಅಪ್ಲಿಕೇಶನ್ ಹಾಕಿದೆ...
ನನ್ನ ಪ್ರಾರ್ಥನೆ ಕೇಳಿತು ಎಂಬಂತೆ, ಸ್ಪೆಷಲ್ ಕಾಫಿ ವಿಷಯ ಅವರು ಯಾರಲ್ಲಿಯೂ ಹೇಳಲಿಲ್ಲ.... ನನ್ನ ಜೊತೆ ವೈಯಕ್ತಿಕವಾಗಿ ಮಾತನಾಡಬೇಕು ಎಂದಾಗ, ಅಪ್ಪನನ್ನು ನೋಡಿದೆ.... ಹೋಗುವಂತೆ ಹೇಳಿದರು... ನಾನು ಅವರನ್ನು ಕರೆದುಕೊಂಡು ಟೆರೇಸ್ ಗೆ ಹೋದೆ....
__ಸೋ ಹೇಳಿ ಮಿಸ್ ಅರ್ಚನಾ ರವರೇ... ನೀವು ಸ್ಪೆಷಲ್ ಕಾಫಿ ಕುಡಿಸಿದ ಎಷ್ಟನೇ ಗಂಡು ನಾನು...._
_ಅದು ಅದು... ನೀವು ಕುಡಿಲಿಲ್ಲ... ಕುಡಿದವರು ಮತ್ತೆ ಈ ಕಡೆ ತಲೆ ಹಾಕಲಿಲ್ಲ... ನಿಮ್ಮನ್ನು ಸೇರಿಸದೆ ೬ ಜನ..._
ಅವರು ನಕ್ಕವರೇ , _ಯಾಕೆ ಮದುವೆ ಇಷ್ಟ ಇಲ್ವಾ..._ ಎಂದು ಕೇಳಿದಾಗ, ಯಾರನ್ನೋ ಮದುವೆಯಾಗಲು ಇಷ್ಟ ಇಲ್ಲ... _ದೇಶ ಕಾಯುವ ಯೋಧನೊಬ್ಬನ ಹೆಂಡತಿಯಾಗಿ ಒಂದು ದಿನವಾದರೂ ಬಾಳಬೇಕು... ಆಮೇಲೆ ಸತ್ತರೂ ಚಿಂತೆ ಇಲ್ಲ_ ಎಂದು ಉತ್ತರಿಸಿದಾಗ.... ನನ್ನ ಕಣ್ಣುಗಳನ್ನೇ ನೋಡಿದವರು..... _ನಾನು ಅಜಯ್... ನಿನ್ನ ಆಸೆ ಖಂಡಿತ ನೆರವೇರುತ್ತದೆ ಹೆಂಡ್ತಿ_ ಎಂದು ಕೆಳಗಿಳಿದು ಹೋದರು....
ನಾನು ಏನು ಅರ್ಥವಾಗದವಳಂತೆ ಅವರು ಹೋದ ದಾರಿಯನ್ನು ನೋಡುತ್ತಾ ನಿಂತೆ.... ಮೊದಲ ನೋಟದಲ್ಲಿ ಅವರು ಇಷ್ಟ ಆಗಿದ್ರು... ಯಾಕಂದರೆ ನನ್ನ ಫೇವರಿಟ್ ಹೀರೋ ವಿಜಯ್ ತರ ಇದ್ರು ನೋಡೋಕೆ... ಮತ್ತೆ ಅವರು ಹೆಂಡ್ತಿ ಅಂದಾಗ, ವಾವ್ ಪೂರ್ತಿ ಕಳೆದು ಹೋಗ್ ಬಿಟ್ಟೆ....
ಆದರೆ ಒಬ್ಬ ಯೋಧನ ಪತ್ನಿಯಾಗಿ ಬಾಳಬೇಕು ಎಂಬ ನನ್ನ ಕನಸು ಎಂದು ಯೋಚಿಸಿದಾಗ, ಏನು ಮಾಡಬೇಕೆಂದು ತಿಳಿಯಲಿಲ್ಲ...
ಕೆಳಗೆ ಹೋದಾಗ ಅಪ್ಪ ಅಮ್ಮ ತುಂಬಾ ಖುಷಿಯಿಂದ ಇದ್ದರು.... ಎಲ್ಲರೂ ಮದುವೆಗೆ ಒಪ್ಪಿದರು... ಆದರೆ ಮದುವೆ ಒಂದು ವರ್ಷ ನಂತರ ಎಂದು ಹೇಳಿದರು.. ಕಾರಣ ಅಜಯ್ ರವರು ಒಬ್ಬ ಯೋಧ.... ನಾಳೆ ಅವರು ಮರಳಿ ಹೋಗಬೇಕು... ಬರೋದು ಒಂದು ವರ್ಷ ಕಳೆದು ಎಂದರು..
ಅವರು ಒಬ್ಬ ಯೋಧನೆಂದು ತಿಳಿದ ನನ್ನ ಖುಷಿಗೆ ಪಾರವಿರಲಿಲ್ಲ... ಜೀವನದಲ್ಲಿ ಒಂದೇ ಒಂದು ಸಾರಿ ಅವರನ್ನು ನೋಡಿದ್ದಾದರೂ,ಪ್ರತಿ ದಿನ ಮಾನಸಿಕವಾಗಿ ಅವರ ಜೊತೆ ಬದುಕುತ್ತಿದ್ದೆ....
ಒಂದು ವರ್ಷ ಕಳೆದು ಮದುವೆ ದಿನ ಹತ್ತಿರ ಬಂತು.... ಆ ದಿನ ಎರಡು ದುರ್ಘಟನೆ ನಡೆದು ಹೋಯಿತು... ಅವರು ಬರುತ್ತಿದ್ದ ಕಾರು ಆ್ಯಕ್ಸಿಡೆಂಟ್ ಆಗಿ ಅವರು ಇಹಲೋಕ ತ್ಯಜಿಸಿದರು... ಈ ಸುದ್ದಿ ತಲುಪಿದ್ದೇ ನಾನು ಮೂರ್ಛೆ ತಪ್ಪಿ ಬಿದ್ದು ಬಿಟ್ಟೆ.... ಎಚ್ಚರ ಆದಾಗ ಕೇಳಿದ ಸುದ್ದಿ ನನ್ನ ಜೀವನದ ದಿಶೆಯನ್ನೇ ಬದಲಾಯಿಸಿತು....
ನನ್ನ ಜೀವನದ ಮೊದಲ ಹೀರೋ... ನನ್ನ ಅಪ್ಪ.... ನನ್ನ ಅಪ್ಪ ನಮ್ಮನ್ನೆಲ್ಲ ಬಿಟ್ಟು ಪರಲೋಕ ಸೇರಿದರು.... ಒಂದೇ ದಿನಗಳಲ್ಲಿ ನನ್ನ ಜೀವನದ ಎರಡು ಅಮೂಲ್ಯ ರತ್ನಗಳನ್ನು ಕಳೆದುಕೊಂಡ ದೌರ್ಭಾಗ್ಯಶಾಲಿ ನಾನು....
ಅದರ ನಂತರ ಕೆಲಸಕ್ಕೆ ಸೇರಿದೆ... ಸುಮ್ಮನೆ ಕುಳಿತರೆ ಹಳೇ ನೆನಪುಗಳು ತುಂಬಾ ಕಾಡುತ್ತದೆ.... ಕಳೆದ ಒಂದು ವರ್ಷದಿಂದ ಅಮ್ಮ ನನಗೆ ಮದುವೆ ಮಾಡಿಸುವ ಪ್ರಯತ್ನದಲ್ಲಿ ತೊಡಗಿದ್ದಾಳೆ. ಆದರೆ ನಾನು ಯಾವತ್ತೋ ಅಜಯ್ ರವರ ಹೆಂಡತಿ ಆಗಿದ್ದೀನಿ. ಅವರ ಸ್ಥಾನದಲ್ಲಿ ಇನ್ನೊಬ್ಬರನ್ನು... ಇಲ್ಲ ಖಂಡಿತ ಸಾಧ್ಯವಿಲ್ಲ...
ಅವಳ ಕಣ್ಣಿಂದ ಜಾರಿದ ಒಂದೊಂದು ಹನಿಯು ಡಯರಿಯ ಅಕ್ಷರಗಳನ್ನು ಅಳಿಸಿತು.....
ಯಾರೋ ಬಾಗಿಲು ಬಡಿದಂತಾಗಿ ತೆರೆದು ನೋಡಿದವಳು ಮಾತು ಬರದ ಮೂಕಿಯಾಗಿದ್ದಳು....
ಅವಳ ಮುಂದೆ ಅವಳ ಅಜಯ್ ನಿಂತಿದ್ದರು.... ಇದು ಕನಸೋ? ನನಸೋ ತಿಳಿಯದಾದಳು....
_ಹೆಂಡ್ತಿ... ನೋಡಿಲ್ಲಿ... ನಾನು ನಿನ್ನ ಅಜಯ್ ಬಂದಿದ್ದೀನಿ..._
_ಮ... ಮತ್ತೆ ಅವತ್ತು... ನೀ... ನೀವು... ಕಾರ್... ಆ್ಯಕ್ಸಿಡೆಂಟ್ ನಲ್ಲಿ
_
_ಅವತ್ತು ಆ್ಯಕ್ಸಿಡೆಂಟ್ ಆಗಿದ್ದು ನಿಜ... ನಾನು ನನ್ನ ಮನೆಯವರು ಎಲ್ಲರನ್ನೂ ಕಳೆದುಕೊಂಡೆ.... ನಾನು ಸತ್ತಿರಲಿಲ್ಲ... ಕೋಮಾ ಗೆ ಹೋಗಿದ್ದೆ... ನನ್ನ ಕಾಪಾಡಿದ್ದು... ಇಷ್ಟು ದಿನ ಚೆನ್ನಾಗಿ ನೋಡ್ಕೊಂಡಿದ್ದು... ಇವರು_ ಎಂದು ಆ ಅಪರಿಚಿತ ವ್ಯಕ್ತಿ ಯ ಕಡೆಗೆ ತೋರಿಸಿ _ಇವರು ಅರ್ಜುನ್_ ಎಂದಾಗ,
ಅರ್ಚನಾ ಳ ತಾಯಿ ವಸುಧಾ ರವರು, _ಈ ವಿಷಯವನ್ನು ಹೇಳಲು ಅವರು ಬಂದದ್ದು.... ಆದರೆ ನಮ್ಮ ಮಾತನ್ನು ಕೇಳೋ ತಾಳ್ಮೆ ನಿನಗೆ ಇರಲಿಲ್ಲ..._
_ಅಂದರೆ ನಿನ್ನ ಮುಖದಲ್ಲಿ ಕಂಡ ಸಂತೋಷಕ್ಕೆ ಕಾರಣ ಇದೇನಾ?... ನಿನ್ನ ತಪ್ಪು ತಿಳ್ಕೊಂಡು ಬಿಟ್ಟೆ... ಕ್ಷಮಿಸಮ್ಮ_ ಎಂದವಳೇ ಅರ್ಜುನ್ ಹಾಗೂ ಅವರ ತಾಯಿಗೆ ಧನ್ಯವಾದ ತಿಳಿಸಿದಳು...
ಅವರಿಬ್ಬರಿಗೆ ಮಾತನಾಡಲು ಅವಕಾಶ ಕೊಟ್ಟು ಉಳಿದವರು ಅಲ್ಲಿಂದ ಹೋದರು...
_ಹೆಂಡ್ತಿ.... ಇಷ್ಟು ವರ್ಷ ನನ್ನಿಂದ ನೀನು ಕಣ್ಣೀರು ಹಾಕೋ ಹಾಗೆ ಆಯ್ತು... ಇನ್ನು ಯಾವತ್ತೂ ನಿನ್ನ ಕಣ್ಣಲ್ಲಿ ನೀರು ಬರದಂತೆ ನೋಡ್ತೀನಿ... ನಾಳೇನೇ ಮದುವೆಯಾಗೋಣ. ನನ್ನ ಮೇಲೆ ಕೋಪ ಇಲ್ಲ ತಾನೇ..._
_ನಿಮ್ಮ ಮೇಲೆ ಕೋಪ ಮಾಡೋಕೆ ಸಾಧ್ಯ ನಾ ಪತಿದೇವ್ರೇ..... ಈ ಬದುಕು ನಿಮಗಾಗಿ ಅಂದಮೇಲೆ ನಿಮ್ಮ ಜೊತೆ ಕೋಪ ಮಾಡಿಕೊಂಡು ಇರೋಕೆ ಆಗಲ್ಲ ನನಗೆ... ಇನ್ನು ಮುಂದೆ ಆದರೂ ಜೊತೆಗೆ ಇರ್ತೀರಿ ಅಲ್ವಾ ಅದೇ ಸಾಕು ನನಗೆ... ಐ ಮಿಸ್ ಯೂ ರೀ...._
_ಐ ಮಿಸ್ ಯೂ ಟೂ ಹೆಂಡ್ತಿ..._
ಮುಕ್ತಾಯ....
(ಎಂದಿನಂತೆ ಮನಸ್ಸಿಗೆ ತೋಚಿದನ್ನು ಗೀಚಿದೆ.... ಅನಿಸಿಕೆಗಳನ್ನು ತಿಳಿಸಿ... ☺☺☺...)
ವಂದನಾ ಗಿರೀಶ್_ ಮಂಗಳೂರು