ವಿಶ್ವಗುರು ಭಾರತ.. ಸಾಧ್ಯವೇ ?

  • 14 Oct 2024 06:35:27 PM

ಉತ್ತರಂ ಯತ್ ಸಮುದ್ರಸ್ಯ ಹಿಮಾದ್ರೇಶ್ಚೈವ ದಕ್ಷಿಣಮ್ |

ವರ್ಷಂ ತದ್ ಭಾರತಂ ನಾಮ ಭಾರತೀ ಯತ್ರ ಸಂತತಿಃ||

 

ಯಾವ ಭೂಭಾಗ ಸಮುದ್ರದ ಉತ್ತರದಲ್ಲಿ ಹಿಮಾಲಯದ ದಕ್ಷಿಣ ದಿಕ್ಕಿನಲ್ಲಿ ನೆಲೆಯಾಗಿದೆ ಅದನ್ನು ಭಾರತ ಹೇಳುತ್ತಾರೆ, ಇಲ್ಲಿ ವಾಸಿಸುವ ಜನರನ್ನು 'ಭಾರತೀಯರು' ಎನ್ನುತ್ತಾರೆ. ಭಾರತ ಒಂದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಂತಹಾ ಸಭ್ಯತೆ. ಭಾರತವನ್ನು ರೂಪಿಸುವಲ್ಲಿ ಋಷಿ ಮುನಿಗಳಿಂದ ಹಿಡಿದು ಇಂದಿನ ಯುವ ಪೀಳಿಗೆಯ ಪಾತ್ರವು ಮಹತ್ವದ್ದು. ಭಾರತ ವಿಶ್ವದಲ್ಲಿನ ಅತ್ಯಂತ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಯುವಕರ ದೇಶ. 

 

'ಅಖಂಡ ಭಾರತ' ಎನ್ನುವ ಪರಿಕಲ್ಪನೆ ಹಿಂದಿನಿಂದಲೇ ನಡೆದುಕೊಂಡು ಬಂದಿದೆ, ಆದರೆ ಇಂದು ಅದು ಕಷ್ಟ ಸಾಧ್ಯ. ಆದರೆ ಭಾರತದ ಸಂಪೂರ್ಣ ಭೂಭಾಗ ನಮ್ಮಲ್ಲಿ ಇದೆಯೋ? ಇಲ್ಲ! ಕಾಶ್ಮೀರದ ಎರಡು ಭಾಗಗಳಾದ ಭಾಗ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಚೀನಾ ಆಕ್ರಮಿತ ಕಾಶ್ಮೀರಗಳು ಭಾರತದ ಹಿಡಿತದಲ್ಲಿ ಇಲ್ಲ ಎಂಬುದು ಲಜ್ಜಾಹೀನ.

 

1947ರಲ್ಲಿ ಸ್ವತಂತ್ರಗೊಂಡ ನಮ್ಮ ಭಾರತ ಅಂದಿನಿಂದ ಇಂದಿನವರೆಗೂ ಹಲವಾರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏರಿಳಿತಗಳನ್ನು ನೋಡುತ್ತಾ 75 ವರ್ಷಗಳನ್ನು ದಾಟಿದೆ. ಭಾರತ ಇಂದು ಆಧುನಿಕ ಜಗತ್ತಿನ ಕೇಂದ್ರ ಬಿಂದು ಎಂದರೆ ತಪ್ಪಾಗಲಾರದು, ಮಾಹಿತಿ ತಂತ್ರಜ್ಞಾನ ರಫ್ತು ರಕ್ಷಣಾ ಸಾಮಗ್ರಿಯಲ್ಲಿ ಸ್ವದೇಶೀಕರಣ, ಆಹಾರ ಕ್ಷೇತ್ರದಲ್ಲಿ ಸ್ವಾವಲಂಬನೆ ಮುಂತಾದ ಸಾಧನೆಗಳು ಭಾರತವನ್ನು ಅಗ್ರಗಣ್ಯವಾಗಿಸುತ್ತದೆ. 

 

ಗ್ರಾಮೀಣ ಪ್ರದೇಶಗಳಲ್ಲಿಯೂ ಹೇರಳ ಪ್ರಮಾಣದ ಅಭಿವೃದ್ಧಿ ಕಂಡಿರುವ ಭಾರತ ಡಿಜಿಟಲ್ ಬ್ಯಾಂಕಿಂಗ್, ಇಂಟರ್ನೆಟ್ ಸೌಲಭ್ಯ, ಸ್ಟಾರ್ಟ್ ಅಪ್ ಗಳು,ಯುನಿಕಾರ್ನ್ ಗಳ ಮೂಲಕ ನವ ಭಾರತ ನಿರ್ಮಾಣದತ್ತ ಹೆಜ್ಜೆ ಇಡುತ್ತಿದೆ. ಹೊಸ ಹೊಸ ಬಂದರುಗಳು, ರೈಲ್ವೆ ನಿಲ್ದಾಣ, ವಿಮಾನ ನಿಲ್ದಾಣಗಳು, ಚತುಷ್ಪಥ ರಸ್ತೆಗಳು ಸಾರಿಗೆ ಕ್ಷೇತ್ರದಲ್ಲಿ ಕ್ರಾಂತಿಯನ್ನು ಸೃಷ್ಟಿಸುವುದಲ್ಲದೆ ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೂ ಪುಟ್ಟ ಕಾಣಿಕೆ ಇದ್ದಂತೆ. 

 

ಸಾಮಾಜಿಕ ಪಿಗುಡುಗಳಾದ ಬಡತನ, ಅಪೌಷ್ಟಿಕತೆ, ಲಿಂಗ ತಾರತಮ್ಯ, ಜಾತಿ ವ್ಯವಸ್ಥೆ, ಭ್ರಷ್ಟಾಚಾರ, ಬಾಲ್ಯ ವಿವಾಹದಂತಹವುಗಳನ್ನು ಎದುರಿಸಿ ಆಧುನಿಕ ಸಮಾಜವನ್ನು ನಿರ್ಮಿಸಬೇಕಾಗಿದೆ. ಸೌರಶಕ್ತಿ, ಬಾಹ್ಯಾಕಾಶ ವಿಜ್ಞಾನ, ಕ್ರೀಡೆ, ಕಲೆ ಮುಂತಾದ ಕ್ಷೇತ್ರಗಳಲ್ಲಿ ಭಾರತದ ಪಾರಮ್ಯವನ್ನು ವಿಶ್ವವೇ ಒಪ್ಪಿಕೊಂಡಿದೆ. ಇಂದು ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತವೇ ದೊಡ್ಡಣ್ಣ, ಪಾಶ್ಚ್ಯಾತ್ಯರು ಕೂಡಾ ಭಾರತದ ಸಂಸ್ಕೃತಿಯನ್ನು ನೋಡಿ ಅನುಕರಿಸುತ್ತಿದ್ದಾರೆ. 

 

ಸಂಪನ್ಮೂಲಗಳ ಸದ್ಬಳಕೆ ಕೂಡ ಪ್ರಸ್ತುತ ಘಟ್ಟದಲ್ಲಿ ಪ್ರಾಮುಖ್ಯವಾಗಿದೆ, ಯಾಕೆಂದರೆ ಭಾರತದಂತಹಾ ವಿಶಾಲ ದೇಶದಲ್ಲಿ ಸಂಪನ್ಮೂಲಗಳ ಕೊರತೆ ಸರ್ವೇಸಾಮಾನ್ಯ. ಯುವಕರಲ್ಲಿ ಪಾಶ್ಚಾತ್ಯ ವಿಚಾರಧಾರೆಗಳ ಅಂಧಾನುಕರಣೆ ಕೂಡ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಆದಷ್ಟು ಸ್ವದೇಶಿ ಉತ್ಪನ್ನಗಳನ್ನು ಉಪಯೋಗಿಸುವ ಮೂಲಕ ಸ್ವಾವಲಂಬನೆಯನ್ನು ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಪ್ರತಿಯೊಬ್ಬರಿಗೂ ತಮ್ಮ ಕರ್ತವ್ಯಗಳ ಅರಿವಾಗಬೇಕಾಗಿದೆ. ತನ್ನ ಕೊಡುಗೆ ಭಾರತದ ಅಭಿವೃದ್ಧಿಗೆ ಏನು ಎಂದು ಎಲ್ಲರೂ ತಿಳಿದರೆ ಭಾರತ 'ವಿಶ್ವಗುರು' ಆಗುವದಂತೂ ನಿಶ್ಚಿತ.

 

ರಚನೆ : ಆದರ್ಶ ಭಟ್ ನಿರ್ಚಾಲು