ತಿರುನೆಲ್ಲಿ - ದೇವರ ನಾಡಿನ ಬಹಳ ವೈಶಿಷ್ಟಪೂರ್ಣ ದೇವಾಲಯಗಳಲ್ಲಿ ಒಂದು ವಯನಾಡ್ ನಿಂದ 32ಕಿಲೋಮೀಟರ್ ಒಳ ಪ್ರದೇಶ ವ್ಯಾಪ್ತಿಯಲ್ಲಿರುವ ತಿರುನೆಲ್ಲಿ ಮಹಾವಿಷ್ಣು ಕ್ಷೇತ್ರ.ಬ್ರಹ್ಮ ದೇವರೇ ಪ್ರತಿಷ್ಠಾಪನೆ ಮಾಡಿ. ಸೃಷ್ಠಿ ಕರ್ತರಾದ ಬ್ರಹ್ಮ ದೇವರು ಮಹಾವಿಷ್ಣುವಿನ ಕುರಿತಾಗಿ ತಪಸ್ಸನ್ನಾಚರಿಸಿದ ತಪೋ ಭೂಮಿ ಎಂಬ ಖ್ಯಾತಿಗೆ ಅರ್ಹವಾದ ಧರ್ಮ ಭೂಮಿ.
ಕಗ್ಗಲ್ಲು ಬಿರಿಯದ ಜಾಗದಲ್ಲಿ ಬ್ರಹ್ಮ ದೇವರು ಯಾಗ ಮಾಡಿದರೆಂದು ಐತಿಹ್ಯ.ಸುಮಾರು 11ನೇ ಶತಮಾನದಷ್ಟು ಹಳೆಯ ಪೌರಾಣಿಕ ಹಿನ್ನಲೆ ಉಳ್ಳ ಪರಮ ಪಾವನ ಪ್ರಕೃತಿ ರಮಣೀಯ ಸ್ಥಳ. #ತಿರುನೆಲ್ಲಿ ಎಂದು ಈ ಸ್ಥಳಕ್ಕೆ ಹೆಸರು ಬರಲು ಕಾರಣವಿದೆ. ಹಿಂದೊಮ್ಮೆ ಮೂವರು ಬ್ರಾಹ್ಮಣರು ಪ್ರಸ್ತುತ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ದಟ್ಟ ಕಾನನ ದಾರಿಯಲ್ಲಿ ನಡೆದುಕೊಂಡು ಬರುತ್ತಾರೆ.
ಹೀಗೆ ಬರುತ್ತಿದ್ದಾಗ ಕೈಯಲ್ಲಿ ಇರುವಂತಹ ಜಲ ಆಹಾರ ವಸ್ತುಗಳು ಖಾಲಿಯಾಗಿ ಹಸಿವು ಮತ್ತು ದಾಹದಿಂದ ಬಳಲುತ್ತಾರೆ. ಹೀಗಿರುವಾಗ ಅನ್ಯ ನಿರ್ವಾಹವಿಲ್ಲದೆ ವನದಲ್ಲಿರುವ ಕಾಯಿ ಹಣ್ಣುಗಳನ್ನು ಅರಸಿಕೊಂಡು ಹೋಗಬೇಕಾದರೆ ನೆಲ್ಲಿಕಾಯಿ ಮರವೊಂದು ಕಾಣಿಸುತ್ತೆ. ಅದನ್ನು ಸೇವಿಸಿ ಹಸಿವನ್ನೂ, ದಾಹವನ್ನೂ ತೀರಿಸಿಕೊಂಡ ಅವರು ಅಲ್ಲೆ ಸಮೀಪ ರಾತ್ರಿ ಮರದ ಕೆಳಗೆ ನಿದ್ರಿಸುತ್ತಾರೆ.
ಹೀಗಿರುವಾಗ ಮಹಾವಿಷ್ಣು ಮತ್ತು ಮಹೇಶ್ವರ ಕನಸಲ್ಲಿ ಪ್ರತ್ಯಕ್ಷವಾಗಿ "ಭಕ್ತರೇ ನೀವು ಸೇವಿಸಿದ ನೆಲ್ಲಿಕಾಯಿ ಮತ್ತು ಮರ ಸಾಧಾರಣವಾದ ಮರವಲ್ಲ ಅದು ದಿವ್ಯತ್ವದಿಂದ ಕೂಡಿರುವುದು.
ನಿಮ್ಮ ನಿಮಿತ್ತ ಈ ಸ್ಥಳವು ಮುಂದೆ ತಿರುನೆಲ್ಲಿ ಎಂದು ಕರೆಯಲ್ಪಡುವುದೆಂದು ಮೂವರಿಗೂ ಒಂದೇ ರೀತಿ ಕನಸು ಕಾಣಿಸುತ್ತೆ. ದೇವರ ಆಜ್ಞೆಯಂತೆ ಅವರು ಆ ಸ್ಥಳಕ್ಕೆ ತಿರುನೆಲ್ಲಿ ಎಂಬ ಹೆಸರಿನಿಂದ ಕರೆಯುತ್ತಾರೆ, ಎನ್ನುವುದು ಸ್ಥಳ ಪುರಾಣ. ಪ್ರಸ್ತುತ ತಿರುನೆಲ್ಲಿ ಮಹಾಕ್ಷೇತ್ರದ ಮಹಾವಿಷ್ಣುವಿನ ವಿಗ್ರಹ ಸುಮಾರು ಮೂರುವರೆ ಅಡಿಯಷ್ಟು ಎತ್ತರವಿದೆ.ಸುತ್ತ ಕಗ್ಗಲ್ಲಿನಿಂದ ಹಳೆಯ ಮಂಟಪದಲ್ಲಿನ ಕಂಬಗಳಲ್ಲಿ ಚಿತ್ರವು ಭಾಸ್ಕರ, ರವಿವರ್ಮರ ಕಾಲದಾಗಿದೆ ಎಂಬುವುದು ಪುರಾತನ ವಸ್ತು ಸಂಶೋಧಕರ ಅಧ್ಯಯನದಿಂದ ದೃಢಪಟ್ಟಿದೆ.
ಈ ಕ್ಷೇತ್ರದಲ್ಲಿ ಬಾವಿ ಇಲ್ಲ ಆದ್ರೆ ಕಗ್ಗಲ್ಲಿನಿಂದ ಮಾಡಿದ ಕಿರಿದಾದ ಕಾಲುವೆ ಮೂಲಕ ಬ್ರಹ್ಮಗಿರಿ ಬೆಟ್ಟದ ತಳದಲ್ಲಿ ಸೃಷ್ಟಿಯಾದ ಒರತೆಯ ಜಲ ಹರಿವು ಮೂಲಕ ಕ್ಷೇತ್ರ ತಲುಪುತ್ತೆ.ಈ ಸುಂದರ ದೃಶ್ಯ ಮತ್ತು ಕಗ್ಗಲ್ಲಿನ ಕಾಲುವೆ ನಿರ್ಮಿಸಿದ ಅಂದಿನ ಕಾರ್ಮಿಕನ ಶ್ರಮ ಕಲಾಗಾರಿಕೆ ನಿಜಕ್ಕೂ ಅದ್ಭುತ ಮತ್ತು ಶ್ಲಾಘನೀಯ.ಇದೂ ಕೂಡಾ ಭಗವಂತನ ಮಹಿಮೆಗೆ ಒಂದು ಪ್ರತ್ಯಕ್ಷ ನಿದರ್ಶನ ಕೂಡಾ..!! ಕ್ಷೇತ್ರ ಪಡುವಣ ದಿಕ್ಕಿನಲ್ಲಿ ಪಾಪನಾಶನಿ ಪುಣ್ಯ ನದಿ ಹರಿಯುತ್ತಿದೆ.
ಆ ನದಿ ಹಾದಿಯಾಗಿ ಸಾಗುವಾಗ ಪಂಚ ಪಾಂಡವರಿಂದ ನಿರ್ಮಿತವಾದ ಪಂಚ ತೀರ್ಥ ಕೊಳಗಳು ಅಥವಾ ಕೆರೆಗಳನ್ನು ಕಾಣುತ್ತೇವೆ. ಶಂಖ ತೀರ್ಥ,ಚಕ್ರ ತೀರ್ಥ,ಪದ್ಮ ತೀರ್ಥ,ಗಧಾ ತೀರ್ಥ,ಪಾದ ತೀರ್ಥವೆನ್ನುವ ಪಂಚ ಪಾಂಡವ ನಿರ್ಮಿತ ಪವಿತ್ರ ಕೊಳಗಳಿವೆ.ಈ ಕೊಳಗಳ ಮಧ್ಯೆ ಕಲ್ಲಿನಲ್ಲಿ ಭಗವಾನ್ ವಿಷ್ಣು ದೇವರ ಪಾದ ಮತ್ತು ಶಂಖ ಚಕ್ರ ಗಧೆ ಪದ್ಮಗಳ ಕುರುಹಿದೆ. ಇಲ್ಲಿಂದ ಅಲ್ಪ ಮುಂದೆ ನಡೆದಾಗ ಗುಂಡಿಕಾ ಕ್ಷೇತ್ರವಿದೆ.
ಇದು ಶಿವ ಸಾನಿಧ್ಯವಿರುವ ತ್ರಿಮೂರ್ತಿಗಳೂ ನೆಲೆಗೊಂಡಿರುವ ಕ್ಷೇತ್ರ. ಪಾಪವಿನಾಶನಿ ನದಿಯಲ್ಲಿ ಪಿತೃ ಕರ್ಮವನ್ನು ನೆರವೇರಿಸಿ ಬರುವ ಭಕ್ತ ಜನರು ಇಲ್ಲಿ ಬಂದು ದೇವರ ದರ್ಶನನಡೆಸುತ್ತಾರೆ. ಕೊಟ್ಟಿಯೂರು ಶಿವ ಕ್ಷೇತ್ರಕ್ಕೂ ಈ ಕ್ಷೇತ್ರಕ್ಕೂ ಅವಿನಾಭಾವ ನಂಟಿದೆ.ಇದೊಂದು ಕ್ಷೇತ್ರ ಮಾತ್ರವಲ್ಲದೆ ಕೊಟ್ಟಿಯೂರು ಕ್ಷೇತ್ರಕ್ಕಿರುವ ಸುರಂಗ ಮಾರ್ಗವೂ ಹೌದು ಆದ್ರೆ ಈಗ ಆಗಿನ ಕಾಲದ ಸುರಂಗ ಮಾರ್ಗವಿಲ್ಲದಾಗಿದೆ ಎನ್ನಲಾಗುತ್ತಿದೆ.
ಅಂದಿನ ಕಾಲದಲ್ಲಿ ಕೊಟ್ಟಿಯೂರು ಕ್ಷೇತ್ರದಲ್ಲಿ ನಡೆಯುವ ಉತ್ಸವದ ಪೂಜಾ ವಿಧಿ ವಿಧಾನಗಳಿಗೆ ಇಲ್ಲಿಂದ ಅಕ್ಕಿ ಅಳೆದು ಕೊಡುವ ಸಂಪ್ರದಾಯವಿತ್ತು. ತಿರುನೆಲ್ಲಿ ಮಹಾರಾಜರು ಕೊಟ್ಟಿಯೂರಿನಿಂದ ಬಂದ ಭೂತಗಣದ ಜೊತೆಗೆ ತಿರುನೆಲ್ಲಿ ಕ್ಷೇತ್ರದ ಭೂತಗಣವನ್ನೂ ಕಳುಹಿಸಿ ಕೊಡುವ ಮೂಲಕ ಅಕ್ಕಿಯನ್ನು ಕಳುಹಿಸಿಕೊಡುತ್ತಿದ್ದರು ಎನ್ನುವುದು ಹಿನ್ನಲೆ.
ಆ ಸಂಪ್ರದಾಯದ ಸಂಕೇತವಾಗಿ ಇಂದಿಗೂ ಕೊಟ್ಟಿಯೂರು ಕ್ಷೇತ್ರ ಉತ್ಸವಕ್ಕೂ ಮೊದಲೇ ಇಲ್ಲಿಂದ ದೈವಗಣವನ್ನು ಹೇಳಿ ಕಳುಹಿಸುವ ಆಚಾರ ತಿರುನೆಳ್ಳಿಯಿಂದ ಕೊಟ್ಟಿಯೂರಿಗೆ ಪಾದ ಯಾತ್ರೆ ಮೂಲಕ ಬರಿಗಾಲಿನಲ್ಲಿ ಖಡ್ಗ ಸಮೇತ ನಡೆದುಕೊಂಡು ಹೋಗುವ ಆಚಾರ ಇಂದಿಗೂ ನಡೆದುಕೊಂಡು ಬರುತ್ತಿದೆ.
ಮರಳಿ ಅಲ್ಲಿಂದ ಹಿಂದುರುಗಿ ಬರುವ ಸಂಪ್ರದಾಯವೂ ಇದೆ. ಇದು ಕೊಟ್ಟಿಯೂರಿಗೂ ತಿರುನೆಲ್ಲಿಗೂ ಇರುವ ಸಂಬಂಧ.ಪಾಪನಾಶಿನಿಯಲ್ಲಿ ಮುಳುಗಿದರೆ ಮೋಕ್ಷ ಪ್ರಾಪ್ತಿ ಆಗುವುದಾಗಿಯೂ ನಂಬಿಕೆ. ಶ್ರೀರಾಮ ಚಂದ್ರ, ಪರುಶುರಾಮ, ಪಂಚ ಪಾಂಡವರು ಪಿತೃ ಕರ್ಮ ನಡೆಸಿದ ಸ್ಥಳವೆ ಇದು ಎನ್ನುವುದು ಸ್ಥಳ ಮಹಿಮೆ.ಮಾತ್ರವಲ್ಲದೆ ಈ ಮಲೆಯಲ್ಲಿ 64ತೀರ್ಥಗಳಿವೆ ಎನ್ನುವುದು ಐತಿಹ್ಯ.
ಬ್ರಹ್ಮಗಿರಿಯ ತಪಲಲ್ಲಿ ಸೃಷ್ಟಿಯಾಗುವ ಜಲವು ಹರಿದು ಪಾಪನಾಶಿನಿ ನದಿ ಸೃಷ್ಠಿಯಾಗುತ್ತೆ. ಇಲ್ಲಿ ಪಿತೃ ತರ್ಪಣ ಮಾಡಿದರೆ ಗತಿಸಿದ ಆತ್ಮಗಳು ಭಗವಂತನಲ್ಲಿ ಐಕ್ಯವಾಗಿ ಮೋಕ್ಷವನ್ನು ಪಡೆಯುತ್ತದೆ ಅನ್ನುವುದು ಭಕ್ತರ ನಂಬಿಕೆ.ಇದು ತಿರುನೆಲ್ಲಿ ಕ್ಷೇತ್ರಗಳ ವಿಶೇಷ ಚರಿತ್ರೆ,ಲೇಖನ.
ರಚನೆ : ಮಣಿರಾಜ್_ಕಾಸರಗೋಡು