ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೃಢಸಂಕಲ್ಪದಿಂದ ಜನ ಔಷದಿ ಕೇಂದ್ರಗಳು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಆರೋಗ್ಯ ಸಂಜೀವಿನಿಯಾಗಿ ಪರಿಣಮಿಸುತ್ತಿವೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಹೇಳಿದ್ದಾರೆ. ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಪಡೆಯಲು ಈ ಯೋಜನೆಯು ತುಂಬಾ ಸಹಾಯ ಮಾಡುತ್ತಿದೆ. ಜನ ಔಷದಿ ಕೇಂದ್ರಗಳು ವೆಚ್ಚವನ್ನು ಕಡಿಮೆ ಮಾಡುವುದರೊಂದಿಗೆ, ಲಕ್ಷಾಂತರ ಜನರಿಗೆ ಆದಾಯ ಉಳಿಸುವುದಕ್ಕೂ ಸಹಾಯಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ನಗರದ ಕಂಕನಾಡಿ ಬೈಪಾಸ್ ಬಳಿಯ ಜನೌಷಧಿ ಕೇಂದ್ರದಲ್ಲಿ ನಡೆದ 'ಜನ್ ಔಷಧಿ ದಿವಸ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ಇವರು "2027ರ ವೇಳೆಗೆ 25,000 ಜನೌಷಧಿ ಕೇಂದ್ರಗಳ ಸ್ಥಾಪನೆಯ ಗುರಿ ಕೇಂದ್ರ ಸರ್ಕಾರಕ್ಕಿದೆ ಎಂದೂ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 128 ಜನೌಷಧಿ ಕೇಂದ್ರಗಳಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಸಂಖ್ಯೆಯನ್ನು 150ಕ್ಕೆ ಹೆಚ್ಚಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.
ವೈದ್ಯರು ಜನೌಷಧಿ ಔಷಧಿಗಳನ್ನು ಶಿಫಾರಸು ಮಾಡುವ ಮೂಲಕ ಈ ಯೋಜನೆಯನ್ನು ಹೆಚ್ಚು ಜನಪ್ರಿಯಗೊಳಿಸಬೇಕು ಎಂದು ಅವರು ಹೇಳಿದರು.ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ, ಜನೌಷಧಿ ಕೇಂದ್ರದ ಮಾಲಕರಾದ ರವೀಶ್, ನ್ಯೂರಾಲಜಿಸ್ಟ್ ಡಾ. ರಾಘವೇಂದ್ರ, ಬಿಜೆಪಿ ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು ಹಲವಾರು ಗಣ್ಯರು ಉಪಸ್ಥಿತರಿದ್ದರು.