ಬಂಟ್ವಾಳ ಕಾಶ್ಮೀರ ಪ್ರವಾಸಿ ಹಿಂದುಗಳ ಮೇಲಿನ ಹತ್ಯೆ ಖಂಡಿಸಿ ಅಮ್ಟೂರಿನಲ್ಲಿ ಪ್ರತಿಭಟನಾ ಸಭೆ ಮತ್ತು ಶ್ರದ್ಧಾಂಜಲಿ ನಮನ!

  • 28 Apr 2025 03:10:47 PM

ಬಂಟ್ವಾಳ: ಜಮ್ಮು-ಕಾಶ್ಮೀರದಲ್ಲಿ ಹಿಂದುಗಳ ಮೇಲೆ ನಡೆದ ಉಗ್ರರ ಹತ್ಯೆಯನ್ನು ಖಂಡಿಸಿ, ಭಾನುವಾರ ಅಮ್ಟೂರಿನ ಶ್ರೀಕೃಷ್ಣ ಮಂದಿರದ ಸಭಾಭವನದಲ್ಲಿ ವಿಶ್ವ ಹಿಂದು ಪರಿಷತ್, ಬಜರಂಗದಳ ಮತ್ತು ಬಿಜೆಪಿ ಅಮ್ಟೂರು ಆಶ್ರಯದಲ್ಲಿ ಪ್ರತಿಭಟನಾ ಸಭೆ ನಡೆಯಿತು. ಪಹಲ್ಗಾಂಮ್‌ನಲ್ಲಿ ನಡೆದ ಭೀಕರ ಹತ್ಯೆಯನ್ನು ತೀವ್ರವಾಗಿ ಖಂಡಿಸಲಾಯಿತು. 

 

 ಪಾಕಿಸ್ತಾನದ ಭಯೋತ್ಪಾದಕರ ಕ್ರೂರ ಕೃತ್ಯವನ್ನು ಖಂಡಿಸಿ ಹತ್ಯೆಯಾದ ಪ್ರವಾಸಿಗ ಸಹೋದರರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 

 

ಸಭೆಗೆ ಶ್ರೀಕೃಷ್ಣ ಮಂದಿರದ ಅಧ್ಯಕ್ಷ ರಮೇಶ್ ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಿದ್ದರು.

 

ಸಭೆಯಲ್ಲಿ ವಿಶ್ವ ಹಿಂದು ಪರಿಷತ್ ಬಂಟ್ವಾಳ ಅಧ್ಯಕ್ಷ, ನ್ಯಾಯವಾದಿ ಪ್ರಸಾದ್ ಕುಮಾರ್ ರೈ ಅವರು ದಿಕ್ಸೂಚಿ ಭಾಷಣ ಮಾಡಿದರು.

 

 ಕಾಶ್ಮೀರದಲ್ಲಿ ಧರ್ಮದ ಆಧಾರದ ಮೇಲೆ ಪ್ರವಾಸಿಗರನ್ನು ಪ್ರತ್ಯೇಕಿಸಿ ಹತ್ಯೆ ಮಾಡಿದ ಘಟನೆ ಆತಂಕಕಾರಿ ಅಂಶವಾಗಿದೆ ಎಂದು ಅವರು ಹೇಳಿದರು. ಹಾಗೆಯೇ ದೇಶದ ಸೌಂದರ್ಯವನ್ನು ವೀಕ್ಷಿಸಲು ಹೋದವರು ಶವವಾಗಿ ಮರಳಿದ ದುರಂತದ ಸಂದರ್ಭವನ್ನು ಅವರು ವಿಷಾದಿಸಿದರು. 

 

ಈ ಹಿನ್ನಲೆಯಲ್ಲಿ ಹಿಂದು ಸಮಾಜವು ತಕ್ಷಣ ಜಾಗೃತರಾಗಬೇಕೆಂಬ ಅಗತ್ಯತೆಯನ್ನು ಕೂಡ ಅವರು ಒತ್ತಿಹೇಳಿದರು.

 

ಹಿಂದು ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಮಾತನಾಡಿ, "ಹಿಂದುಗಳು ಇನ್ನು ಜಾಗೃತರಾಗದೇ ಇದ್ದರೆ ಉಳಿಗಾಲವಿಲ್ಲ" ಎಂದು ಖಡಕ್ ಎಚ್ಚರಿಕೆಯನ್ನುನೀಡಿದರು. ಕ್ರಿಕೆಟ್ ಆಟವಾಡುವುದಕ್ಕಿಂತ ಇಂದಿನ ಯುವ ಸಮುದಾಯವು ತಮ್ಮ ಧರ್ಮ ಹಾಗೂ ಸಮಾಜದ ಮೇಲಿನ ಅಪಾಯಗಳನ್ನು ಅರಿತು ಚಿಂತಿಸಬೇಕಾಗಿದೆ ಎಂಬುದಾಗಿ ಅವರು ಸಲಹೆ ನೀಡಿದರು.

 

 ಕಾಶ್ಮೀರದಲ್ಲಿ ನಡೆದ ಹತ್ಯೆಯು 'ಅಪಾಯದ ಕರೆಗಂಟೆ' ಎಂಬುದಾಗಿ ಅವರು ಅಭಿಪ್ರಾಯಪಟ್ಟರು ಮತ್ತು ಹಿಂದು ಸಮಾಜ ಒಗ್ಗೂಡಬೇಕಾದ ಕಾಲ ಬಂದಿರುತ್ತದೆ ಎಂದು ಧ್ವನಿಸಿದರು.

 

ಸಭೆಯಲ್ಲಿ ಜಿಲ್ಲಾ ಸನಾತನ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಯರಾಮ್ ಶೆಟ್ಟಿಗಾರ್, ಬಿಜೆಪಿ ಹಿರಿಯ ನಾಯಕ ಗೋಪಾಲ್ ಪೂಜಾರಿ, ಜ್ಯೋತಿ ಮಹಿಳಾ ಮಂಡಲದ ಅಧ್ಯಕ್ಷ ಲಕ್ಷ್ಮಿ ಪ್ರಭು, ವಿಶ್ವ ಹಿಂದು ಪರಿಷತ್ ಬಜರಂಗದಳ ಅಮ್ಟೂರು ಘಟಕದ ಪ್ರಮುಖ ಜಿತೇಶ್ ಶೆಟ್ಟಿ ಬಾಳಿಕೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

 

 ಕಾರ್ಯಕ್ರಮ ನಿರೂಪಣೆಯನ್ನು ಗೋಪಾಲ್ ಪೂಜಾರಿ ನೆರವೇರಿಸಿ ನುಡಿ ನಮನ ಸಲ್ಲಿಸಿದರು. ವಂದನಾಪೂರ್ವಕವಾಗಿ ಕುಶಾಲಪ್ಪ ಅಮ್ಟೂರು ಅವರು ವಂದಿಸಿದರು.