ಮೂಡಬಿದ್ರೆ -ಸಾಹಸ ಮತ್ತು ಮಾನವೀಯತೆ ಮೆರೆದ ರಿಕ್ಷಾ ಚಾಲಕಗೆ ಸನ್ಮಾನ

  • 13 Nov 2024 06:51:27 PM

ಮೂಡುಬಿದಿರೆ: ಮೂಡುಬಿದಿರೆ  ತಾಲೂಕಿನ ತೋಡಾರ್ ಪ್ರದೇಶದ ಮೈಟ್ ಇಂಜಿನಿಯರಿಂಗ್ ಕಾಲೇಜ್ ತಿರುವಿನ ಹತ್ತಿರ ಖಾಸಗಿ ಬಸ್ ಸ್ಕೂಟರ್ ಗೆ ಡಿಕ್ಕಿಹೊಡೆದು ನೆಲಕ್ಕುರುಳಿ ನೋವು ಅನುಭವಿಸುತ್ತಿದ್ದ ಸವಾರ ಗಾಯಾಳುವನ್ನು ರಕ್ಷಿಸಲು ಬಸ್ ನ  ಎದುರು ತನ್ನ ರಿಕ್ಷಾ ವನ್ನು ಅಡ್ಡ ಇಟ್ಟು ಸಾಹಸ ಮೆರೆದು ಗಾಯಳುವನ್ನು ಆಸ್ಪತ್ರೆಗೆ ಸಾಗಿಸಲು ನೆರವಾದ ರಿಕ್ಷಾ  ಚಾಲಕ ವಿಶ್ವನಾಥ್ ಪೂಜಾರಿ ಅವರಿಗೆ ಮಂಗಳವಾರ ಸಂಜೆ ಸಮಾಜ ಮಂದಿರದಲ್ಲಿ  ಸನ್ಮಾನ ನಡೆಯಿತು.
ಹಿಂದೂ ಜಾಗರಣ ವೇದಿಕೆ ಮೂಡುಬಿದಿರೆ ತಾಲೂಕು ನೇತೃತ್ವದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಇವರಿಗೆ ಶಾಲು ಹೊದಿಸಿ ಫಲ ಪುಷ್ಪ ನೀಡಿ ಅಭಿನಂದಿಸಲಾಯಿತು. 

 

ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ ಮಾತನಾಡಿ ರಾತ್ರಿ ಹಗಲೆನ್ನದೆ ವೃತ್ತಿ ನಿರ್ವಹಿಸುವ ರಿಕ್ಷಾ ಚಾಲಕರು ತೋರುವ ಸೇವೆ, ಮಾನವೀಯ ಮೌಲ್ಯ ಶ್ರೇಷ್ಠವಾದುದು ಎಂದೂ ವಿಶ್ವನಾಥ್ ಪೂಜಾರಿಯವರ ಹೃದಯವಂತಿಕೆ ಬೆಳಕಿಗೆ ಬಂದಂತಾಗಿದೆ ಎಂದರು.
ಹಿಂಜಾವೇ ಜಿಲ್ಲಾ ಸಹ ಸಂಯೋಜಕ ಸಮಿತ್ ರಾಜ್ ದರೆಗುಡ್ಡೆ ಮಾತನಾಡಿ ರಿಕ್ಷಾ ಚಾಲಕರ ಸಮಯೋಚಿತ ಕಾರ್ಯ, ಸಂಘಟನೆಯ ಬದ್ಧತೆಗಾಗಿ ಈ ಕಾರ್ಯಕ್ರಮ. ಬದುಕು ನೀಡಿದ ರಿಕ್ಷಾ, ತನ್ನ ಪ್ರಾಣ ಲೆಕ್ಕಿಸದೆ ವಿಶ್ವನಾಥ್ ರವರು ತೋರಿದ ಕಾಳಜಿಯೇ ಮಾದರಿ ಎಂದರು. ಖಾಸಗಿ ಬಸ್ಸುಗಳು ತನ್ನ ಅಜಾಗರುಕತೆಯ ಚಾಲನೆಯಿಂದ ಹಲವಾರು ಅವಾಂತರ ನಡೆಸಿ ಪ್ರಾಣ ತೆಗೆಯುವ ಕೆಲಸಮಾಡಿದೆ ಎಂದರು. ಈ ಬಗ್ಗೆ ಬಸ್ ಮಾಲಕರು ಎಚ್ಚರ ವಹಿಸಬೇಕು ಎಂದು ಕೂಡ ಹೇಳಿದರು.

 

ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೋಡಂಗಲ್ಲು, 
ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಯೋಜಕ ಹರೀಶ್ಚಂದ್ರ ಕೆ. ಸಿ., ಮಾಜಿ ಅಧ್ಯಕ್ಷ ಸಂದೀಪ್ ಹೆಗ್ಡೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸನ್ಮಾನಿತ ವಿಶ್ವನಾಥ್ ಪೂಜಾರಿ ಮಾತನಾಡಿ *ಅಪ್ಫಘಾತ ಆದಾಗ ವೀಡಿಯೊ ಮಾಡುವ ಮೊದಲು ಗಾಯಳುವನ್ನು ಬದುಕಿಸಿ* ಎಂದು ಮಾನವೀಯತೆ ತೋರುವಂತೆ ಕರೆಯಿತ್ತರು. 


ಸಹ ಸಂಯೋಜಕರಾದ ಶರತ್ ಮಿಜಾರು, ಸಂತೋಷ್ ಜೈನ್, ದರೆಗುಡ್ಡೆ ಪಂಚಾಯತ್ ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕುಮಾರ್ ಪ್ರಸಾದ್, ಭಾರತೀಯ ಮಜದೂರು ಸಂಘದ ಅಧ್ಯಕ್ಷ ರಾಜೇಶ್ ಸುವರ್ಣ ಭಾಗವಹಿಸಿದ್ದರು. ಹಿಂಜಾವೇ ಜಿಲ್ಲಾ ಪ್ರಮುಖ್ ಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಕಾರ್ಯಕ್ರಮವನ್ನು ನಿರೂಪಿಸಿದರು.