ಪುತ್ತೂರು: ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಅದೆಷ್ಟೋ ವರ್ಷಗಳಿಂದ ಧರ್ಮ ಜಾಗೃತಿಯ ಕೆಲಸ ಕಾರ್ಯಗಳನ್ನು ನಡೆಸುತ್ತಾ ಬಂದಿದೆ. ಅರುಣ್ ಕುಮಾರ್ ಪುತ್ತಿಲ ಅವರ ನೇತೃತ್ವದಲ್ಲಿ ಧರ್ಮಪರ ಕಾಳಜಿಯನ್ನಿಟ್ಟುಕೊಂಡು ಕೆಲಸ ಕಾರ್ಯಗಳನ್ನು ಮಾಡುತ್ತಿದೆ. ಈ ಸಂಘಟನೆಯ ನೇತೃತ್ವದಲ್ಲಿ ಕಳೆದ ಬಾರಿ ಶ್ರೀನಿವಾಸ ಕಲ್ಯಾಣೋತ್ಸವ ಭಾರೀ ವಿಜೃಂಭಣೆಯಿಂದ ನಡೆದಿತ್ತು. ಅದೇ ರೀತಿ ಈ ಬಾರಿ ಕೂಡಾ ಇಂತಹ ಕಾರ್ಯಕ್ರಮ ಆಯೋಜಿಸಲು ಯೋಜನೆಗಳನ್ನು ಹಾಕಲಾಗುತ್ತಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು.
ಡಿ.28, 29ರಂದು ಪುತ್ತೂರಿನಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ...!!
ಈ ಬಾರಿ ಜನರ ಅಪೇಕ್ಷೆಯಂತೆ ಡಿ.28,29ರಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಇದರ ಪೂರ್ವಭಾವಿಯಾಗಿ ಡಿ.15ರಂದು ಭೂಮಿ ಪೂಜೆ ನಡೆಯಲಿದೆ ಎಂದು ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ ಹೇಳಿದರು. ಹಿಂದೂ ಸಮಾಜದ ಕಲ್ಯಾಣಕ್ಕಾಗಿ ಎರಡು ದಿನಗಳ ಕಾಲ ಶ್ರೀನಿವಾಸ ಕಲ್ಯಾಣೋತ್ಸವವನ್ನು ನೆರವೇರಿಸಲಾಗುತ್ತದೆ. ಈ ಸಂದರ್ಭ ಸುಮಾರು 75 ಸಾವಿರ ಮಂದಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗುತ್ತಿದ್ದು 25ಸಾವಿರ ಲಡ್ಡು ಪ್ರಸಾದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಂಗವಾಗಿ ಡಿ.27ರಂದು ಪುತ್ತೂರು ದರ್ಬೆ ವೃತ್ತದಿಂದ ದೇಗುಲದ ದೇವಮಾರು ಗದ್ದೆಗೆ ಹೊರೆಕಾಣಿಕೆ ಸಮರ್ಪಣೆಯ ಮೆರವಣಿಗೆ ನಡೆಯಲಿದೆ.
ನಡೆಯಲಿರುವ ಕಾರ್ಯಕ್ರಮಗಳು:-
ಮೊದಲಿಗೆ ಶ್ರೀನಿವಾಸ ದೇವರನ್ನು ಡಿ.28ರಂದು ಬೊಳುವಾರಿನಲ್ಲಿ ಬರಮಾಡಿಕೊಳ್ಳಲಿದ್ದು ಬೃಹತ್ ಶೋಭಾಯಾತ್ರೆಯ ಮೂಲಕ ದೇವಮಾರು ಗದ್ದೆಗೆ ಮೆರವಣಿಗೆಯ ಮೂಲಕ ಸಾಗಿಬರಲಿದೆ. ನಂತರ ಉಡುಪಿ ಮತ್ತು ದ.ಕ ಜಿಲ್ಲೆಯ ಸ್ವಾಮೀಜಿಗಳ ಉಪಸ್ಥಿತಿಯಲ್ಲಿ ಹಿಂದೂ ಸಮಾಜಕ್ಕೆ ಪುಷ್ಠಿ ನೀಡುವ ಧ್ಯೇಯೋದ್ದೇಶದಿಂದ ಧರ್ಮಸಂಗಮ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ರಾತ್ರಿ 9 ಗಂಟೆಯಿಂದ ದೇವದಾಸ್ ಕಾಪಿಕಾಡ್ ನೇತೃತ್ವದಲ್ಲಿ ತುಳು ಹಾಸ್ಯ ನಾಟಕ ನಡೆಯಲಿದೆ. ಡಿ.29ರಂದು ಬೆಳಿಗ್ಗೆ 5.35ರಿಂದ ಸುಪ್ರಭಾತ ಪೂಜಾ ಸೇವೆಯ ಮೂಲಕ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡು ಸಂಜೆ 6ರ ಬಳಿಕ ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. ಮಧ್ಯಾಹ್ನ ಭಜಕರಿಂದ ಭಜನೋತ್ಸವ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಇಜ್ಜಾವು ಸೇರಿದಂತೆ ಕಾರ್ಯದರ್ಶಿಗಳು ಮತ್ತು ಪ್ರಚಾರ ಸಮಿತಿಯ ಸಂಚಾಲಕು ಉಪಸ್ಥಿತರಿದ್ದರು.