ಮಂಗಳೂರು: ಪ್ರಸಿದ್ಧ ಯಕ್ಷ ಪ್ರತಿಭೆ ಮಂಗಳೂರು ತನ್ನ 16ನೇ ವರ್ಷದ ಸಂಭ್ರಮವನ್ನು ಡಿಸೆಂಬರ್ 17ರಂದು 5.45ಕ್ಕೆ ಮಂಗಳಾದೇವಿ ದೇವಸ್ಥಾನದ ಮುಂಭಾಗದಲ್ಲಿ ವಿಜೃಂಭಣೆಯಿಂದ ಆಚರಿಸಲಿದೆ. ಈ ಸಂದರ್ಭ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಮತ್ತು ವಿವಿಧ ಸಾಧಕರಿಗೆ ಗೌರವ ಸಮರ್ಪಣೆ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಸಂಜಯ್ ಕುಮಾರ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
*ಪ್ರಶಸ್ತಿ ವಿಜೇತರು:*
ಈ ವರ್ಷದ ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಸಂಸ್ಮರಣಾ ಪ್ರಶಸ್ತಿ ಖ್ಯಾತ ಬಣ್ಣದ ವೇಷಧಾರಿ *ಸದಾಶಿವ ಶೆಟ್ಟಿಗಾರ್ ಸಿದ್ದಕಟ್ಟೆ* ಅವರಿಗೆ ನೀಡಲಾಗುತ್ತದೆ.
ಅಸ್ರಣ್ಣ ಗೌರವ ಸನ್ಮಾನ ಖ್ಯಾತ ಹೃದಯರೋಗ ತಜ್ಞ *ಡಾ. ಪದ್ಮನಾಭ ಕಾಮತ್ ಮೃದಂಗ ವಾದಕ ಪದ್ಮನಾಭ ಶೆಟ್ಟಿಗಾರ್ ಪಕ್ಷಿಕೆರೆ, ಮತ್ತು ಪ್ರಸಿದ್ಧ ನಿರೂಪಕ ಜನಾರ್ದನ ಅಮ್ಮುಂಜೆ* ಅವರಿಗೆ ಪ್ರದಾನ ಮಾಡಲಾಗುತ್ತದೆ.
ಈ ಕಾರ್ಯಕ್ರಮದ ಸಮಾರಂಭವನ್ನು ಕಟೀಲು ಲಕ್ಷ್ಮೀನಾರಾಯಣ ಅಸ್ರಣ್ಣ ಶುಭ ಹಾರೈಸಲಿದ್ದು ನಳಿನ್ ಕುಮಾರ್ ಕಟೀಲು ಉದ್ಘಾಟಿಸಲಿದ್ದಾರೆ, ಅದಾನಿ ಗ್ರೂಪ್‌ನ ಕಿಶೋರ್ ಆಳ್ವ, ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್, ಮೇಯರ್ ಮನೋಜ್ ಕುಮಾರ್, ಮತ್ತು ಅರುಣ್ ಐತಾಳ್ ಮುಂತಾದವರು ಉಪಸ್ಥಿತರಿರುತ್ತಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಹರಿಕೃಷ್ಣ ಪುನರೂರು, ಗೌರವ ಸಲಹೆಗಾರ ಅಗರಿ ರಾಘವೇಂದ್ರ ರಾವ್, ಸುಜಾತ ಶೆಟ್ಟಿ, ಮೋಹನ್ ದಾಸ್ ರೈ, ಹಾಗೂ ಇನ್ನಿತರರು ಉಪಸ್ಥತರಿದ್ದರು.