ಮಂಗಳೂರು: ಎಂ.ಆರ್.ಪಿ.ಎಲ್ ಸಂಸ್ಥೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜೈಪುರ್ ಪೂಟ್ಸ್ ನ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಎಂಬ ಸ್ಥಳಗಳಲ್ಲಿ ಎಂಡೋಸಲ್ಪಾನ್ ಪೀಡಿತರಿಗೆ ಕೃತಕ ಕಾಲು ನೀಡುವ ಶಿಬಿರವನ್ನು ಆಯೋಜಿಸಲಾಗಿತ್ತು.
ಸುಮಾರು ₹13 ಲಕ್ಷ ವೆಚ್ಚದಲ್ಲಿ 77 ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ವಿತರಿಸಲಾಯಿತು. ಶಿಬಿರದ ವಿಶೇಷವೇನೆಂದರೆ ಫಲಾನುಭಾವಿಗಳಿಗೆ ಕಾಲಿನ ಅಳತೆ ಪಡೆದು ತಕ್ಷಣವೇ ಸ್ಥಳದಲ್ಲೇ ತಯಾರಿಸಿದ ಕೃತಕ ಕಾಲುಗಳನ್ನು ವಿತರಿಸುತ್ತಿದ್ದರು
ಮೂರು ದಿನಗಳ ಕಾಲ ನಡೆದಂತಹ ಈ ಶಿಬಿರಗಳು ಸ್ಥಳೀಯ ಸರ್ಕಾರಿ ಆಸ್ಪತ್ರೆಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಪೌಷ್ಠಿಕ ಆಹಾರದ ಕಿಟ್‌ಗಳನ್ನೂ ನೀಡಲಾಯಿತು.
ಎಂ.ಆರ್.ಪಿ.ಎಲ್ ಸಂಸ್ಥೆ ಈ ಹಿಂದೆ ಹಾಸಿಗೆಯಲ್ಲೇ ಇರುವ ಎಂಡೋಸಲ್ಪಾನ್ ಪೀಡಿತರಿಗೆ ದಿನಬಳಕೆಯ ಕಿಟ್‌ಗಳನ್ನು ವಿತರಿಸಿದ್ದರು. ಈ ಸಹಾಯಕ್ಕಾಗಿ ಫಲಾನುಭಾವಿಗಳು ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದರು.
ಎಂ.ಆರ್.ಪಿ.ಎಲ್ ನಮ್ಮಂತಹ ಫಲಾನುಭವಿಗಳಿಗೆ ನಿರಂತರ ಸಹಕಾರವನ್ನು ನೀಡುತ್ತಿದೆ. ಈ ಕೃತಕ ಕಾಲು ಶಿಬಿರವು ಅವರ ಸಮಾಜಮುಖಿ ಕಾರ್ಯದ ಉತ್ತಮ ಉದಾಹರಣೆಯಾಗಿದೆ. ನಾವು ಈ ಸಂಸ್ಥೆಗೆ ಎಂದಿಗೂ ಕೃತಜ್ಞರಾಗಿರುತ್ತೇವೆ ಎಂದು ಅರಂಬೋಡಿಯ ಫಲಾನುಭವಿ ರಕ್ಷಕ ಸವಿತಾ ಶೆಟ್ಟಿ ಮಾಧ್ಯಮಗಳಿಗೆ ಹೇಳಿದರು.
ಪುತ್ತೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರು ಎಂ.ಆರ್.ಪಿ.ಎಲ್ ತನ್ನ ಸಿ.ಎಸ್.ಆರ್ ಅನುದಾನದ ಮೂಲಕ ಹಲವು ವರ್ಷಗಳಿಂದ ಎಂಡೋಸಲ್ಪಾನ್ ಪೀಡಿತರಿಗೆ ಸಹಾಯ ಮಾಡುತ್ತಿದ್ದಾರೆ. ಈಗ ಈ ಉಚಿತ ಕೃತಕ ಕಾಲು ಶಿಬಿರ ಆಯೋಜಿಸಿರುವ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನು ಪುನಃ ಸಾಬೀತುಪಡಿಸಿದೆ. ಅವರು ನಡೆಸುತ್ತಿರುವ e ಸಮಾಜಮುಖಿ ಚಟುವಟಿಕೆಗಳಿಗೆ ನಾನು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳಾದ ಡಾ. ದೀಪಕ್ ರೈ ಮತ್ತು ಡಾ. ಸಂಜಾತ್ ಅವರು ಎಂಡೋಸಲ್ಪಾನ್ ಜಿಲ್ಲಾ ಸಂಯೋಜಕರಾದ ಸಾಜುದೀನ್, ಎಂ.ಆರ್.ಪಿ.ಎಲ್ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ ಮತ್ತು ಇತರರು ಉಪಸ್ಥಿತರಿದ್ದರು.