ಮಂಗಳೂರು: ದಕ್ಷಿಣ ಕನ್ನಡ ಸಂಸದ ಹಾಗೂ ಮಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಕ್ಯಾ.ಬ್ರಿ ಜೇಶ್ ಚೌಟ ನೇತೃತ್ವದ ಬಂಗ್ರ ಕೂಳೂರಿನ ಗೋಲ್ಡ್ ಫಿಂಚ್ ಸಿಟಿಯ ರಾಮ-ಲಕ್ಷ್ಮಣ ಜೋಡು ಕರೆಯಲ್ಲಿ 8 ನೇ ವರ್ಷದ ಮಂಗಳೂರು ಕಂಬಳಕ್ಕೆ ಶನಿವಾರ ಬೆಳಗ್ಗೆ ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗಿನ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ಕ್ಯಾ.ಎಂ.ವಿ. ಪ್ರಾಜಲ್ ಅವರ ತಂದೆ, ಎಂಆರ್ ಪಿಎಲ್ ನ ನಿವೃತ್ತ ಆಡಳಿತ ನಿರ್ದೇಶಕರಾದ ಎಂ. ವೆಂಕಟೇಶ್ ಅವರು ಚಾಲನೆಯನ್ನು ನೀಡಿದರು.
ಕ್ಯಾ.ಎಂ.ವಿ. ಪ್ರಾಂಜಲ್ ಆಟವಾಡಿ ಬೆಳೆದ ನೆಲವಾದ ತುಳುನಾಡಿನ ಸಾಂಸ್ಕೃತಿಕ ವೈಭವ ಕಂಬಳವಿದು ಇಂದು ಮಗ ಬದುಕಿರುತಿದ್ದರೆ ಈ ಸಂಸ್ಕೃತಿಯನ್ನು ಆನಂದಿಸಲು ನಾವು ಅವನ ಜೊತೆ ಬರುತ್ತಿದ್ದೆವು ಎಂದು ಭಾವುಕರಾಗಿ ಎಂ. ವೆಂಕಟೇಶ್ ಅವರು ಹೇಳಿದರು.
ಅದಲ್ಲದೆ ನಾವೆಲ್ಲರೂ ಈ ಭವ್ಯ ತುಳುನಾಡಿ ಸಂಸ್ಕೃತಿಯ ಭಾಗವಾಗಿದ್ದು ಕೊಂಡು ಇವೆಲ್ಲವನ್ನು ನಮ್ಮ ತಾಯಿನಾಡಿನ ಪರಿಸರದಿಂದ, ಪ್ರಾಣಿ-ಪಕ್ಷಿಗಳಿಂದ ಕಲಿಯಬೇಕು. ಈ ಮಣ್ಣಿನ ಜನಪದ ಕ್ರೀಡೆಯಾದ ಕಂಬಳವು ಉನ್ನತ ಸ್ಥಿತಿಯಲ್ಲಿರುವುದು ಬಹಳ ಹೆಮ್ಮಯ ವಿಚಾರ ಎಂದು ಹೇಳಿದರು.
ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಅಧ್ಯಕ್ಷ ಕೆ. ಚಿತ್ತರಂಜನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗುರುಪುರ ವಜ್ರ ದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ರಾಮಕೃಷ್ಣ ಮಠದ ಚಿದಂಬರನಾಂದ ಸ್ವಾಮೀಜಿ, ಶ್ರೀ ಕಟೀಲು ದುರ್ಗಾ ಪರಮೇಶ್ವರಿ ದೇವಳದ ಅರ್ಚಕರಾದ ಅನಂತ ಪದ್ಮನಾಭ ಅಸ್ರಣ್ಣ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ವಿಶ್ವವಿದ್ಯಾಲಯದ ಪ್ರೊ. ಪಿ.ಎಲ್ ಧರ್ಮ ಅವರು , ಕಂಬಳವನ್ನು ನಮ್ಮ ಪೂರ್ವಿಕರು ಪ್ರಾರಂಭ ಮಾಡಿದ್ದಾಗ ಅದು ಬೇಧ-ಭಾವವಿಲ್ಲದೆ ಇಡೀ ಸಮಾಜವನ್ನು ಒಟ್ಟುಗೂಡಿಸುವ ವೇದಿಕೆಯಾಗಿತ್ತು. ಆದರೆ ಇಂದು ಕಂಬಳದ ಮೂಲಕ ದೇಶ ಕಟ್ಟುವ ಮತ್ತು ಒಟ್ಟಾಗುವ ಕೆಲಸವೂ ಆಗಲಿ ಎಂದು ತಮ್ಮ ಮನದಾಳದ ಮಾತುಗಳನ್ನು ಆಡಿದರು.
ಕಂಬಳ ನಿಷೇಧದ ವಿರುದ್ಧ ಕಂಬಳ ಉಳಿಸುವ ಹೋರಾಟ ನಡೆಸುವ ಸಂದರ್ಭದಲ್ಲಿ ಮಕ್ಕಳಿಂದ ಹಿಡಿದು ಮಹಿಳೆಯರು ಯುವಕರು ಎಂಬ ಬೇಧ-ಭಾವವಿಲ್ಲದೆ ಜೊತೆಗೆ 200 ಜೋಡಿ ಕೋಣಗಳು ಸೇರಿ ನಡೆಸಿದ ಹೋರಾಟವು ತುಳುನಾಡಿನ ಇತಿಹಾಸದಲ್ಲಿ ಇನ್ನೊಂದು ಇಲ್ಲ. ಆ ಸಮಯದಲ್ಲಿ ಸೇರಿದ್ದ ಯುವಕರು ನಮ್ಮ ಸಂಸ್ಕೃತಿಯನ್ನು ಉಳಿಸುವ ಮತ್ತು ಪರಿಚಯಿಸುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಕಂಬಳವನ್ನು ಆರಂಭಿಸುವ ನಿರ್ಣಯವನ್ನು ತೀರ್ಮಾನಿಸಲಾಗಿತ್ತು ಎಂದೂ ಎಂ.ಆರ್. ಜಿ ಗ್ರೂಪ್ ನ ಸಿ.ಎಂ.ಡಿ ಪ್ರಕಾಶ್ ಶೆಟ್ಟಿ ಅವರು ವಿಶಾಲವಾದ ಜಾಗವನ್ನು ಒದಗಿಸಿ ಈ ಕಾರ್ಯಕ್ರಮ ನಡೆಸಲು ಸಹಕಾರ ನೀಡಿದ್ದಾರೆ ಎಂದು ಹೇಳಿದರು.
*ಮಾಜಿ ಪ್ರಧಾನಿ ಡಾ. ಸಿಂಗ್ ಹಾಗೂ ಅಗಲಿದ ಯೋಧರಿಗೆ ನಮನ:-*
ಈ ಕಾರ್ಯಕ್ರಮದಲ್ಲಿ ಭಾರತಾಂಬೆಗೆ ಪುಷ್ಪಾರ್ಚನೆ ಸಲ್ಲಿಸಿ, ನಮ್ಮನ್ನಗಲಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರಿಗೆ ಮೌನ ಪ್ರಾರ್ಥನೆಯ ಮೂಲಕ ಗೌರವ ನಮನವನ್ನು ಸಲ್ಲಿಸಲಾಯಿತು.
ನಂತರ ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಡಿ.24ರ ಸಂಜೆ ಸೇನಾ ವಾಹನ ಪ್ರಪಾತಕ್ಕೆ ಉರುಳಿದ ದುರಂತದಲ್ಲಿ ಮಡಿದ ಕುಂದಾಪುರದ ಅನೂಪ್ ಸಹಿತ ಐವರು ಯೋಧರಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಮಂಗಳೂರು ಕಂಬಳ ಉಪಾಧ್ಯಕ್ಷ ಕೇಶವ ಬಂಗೇರ ನಿರೂಪಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಕ್ಯಾ. ಗಣೇಶ್ ಕಾರ್ಣಿಕ್ , ಮಂಗಳೂರು ಕಂಬಳ ಸಂಚಾಲಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಹರಿಕೃಷ್ಣ ಪುನರೂರು, ಜಯರಾಮ್ ಶೆಟ್ಟಿ ಕುಡುಂಬೂರು ಗುತ್ತು, ಆಶಿಕ್ ಬಳ್ಳಾಲ್ ಕೂಳೂರು ಬೀಡು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷರಾದ ತುಕರಾಮ್ ಪೂಜಾರಿ, ನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ,ಅನಿಲ್ ಕುಮಾರ್, ಪಾಲಿಕೆ ಸದಸ್ಯರಾದ ಕಿರಣ್ ಕುಮಾರ್ ಕೋಡಿಕಲ್, ಮಾಜಿ ಮೇಯರ್ ಕವಿತಾ ಸನಿಲ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ , ಕರ್ನಲ್ ಶರತ್ ಭಂಡಾರಿ ಕ್ಯಾ. ದೀಪಕ್ ಅಡ್ಯಂತಾಯ, ಬ್ರಿಗೇಡಿಯರ್ ಐ.ಎನ್ ರೈ, ಪ್ರದೀಪ್ ಕುಮಾರ್ ಕಲ್ಕೂರ, ಮಂಗಳೂರು ಕಂಬಳ ಸಮಿತಿ ಗೌರವ ಸಲಹೆಗಾರ ಪ್ರಸಾದ್ ಕುಮಾರ್ ಶೆಟ್ಟಿ, ಬಯಲುಗುತ್ತು ಮಾರಪ್ಪಣ್ಣ ಮುಂತಾದ ಗಣ್ಯರು ಉಪಸ್ಥಿತರಿದ್ದರು.