ದೇವಸ್ಥಾನ ಸಂಸ್ಕೃತಿ ರಕ್ಷಣೆಗಾಗಿ ಬೆಂಗಳೂರಿನಲ್ಲಿ ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನದ ಆಯೋಜನೆ ! ಜನವರಿ 4 ಮತ್ತು 5 ಕ್ಕೆ ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್ ಸೆಂಟರ್ ನಲ್ಲಿ!!!

  • 02 Jan 2025 04:49:06 PM

ಬೆಂಗಳೂರು : ನಮ್ಮ ರಾಜ-ಮಹಾರಾಜರು ದೇವಸ್ಥಾನಗಳನ್ನು ನಿರ್ಮಿಸಿದ್ದರು. ಕದಂಬರಿಂದ ಹಿಡಿದು ವಿಜಯನಗರದ ರಾಜಮಹಾರಾಜರು, ಇತ್ತೀಚಿನ ಮೈಸೂರು ಮಹಾರಾಜರವರೆಗೆ ಸಾವಿರಾರು ದೇವಸ್ಥಾನಗಳ ನಿರ್ಮಾಣ ಹಾಗೂ ಆಕ್ರಮಣಕಾರರಿಂದ ಧ್ವಂಸಗೊಂಡಿದ್ದ ದೇವಸ್ಥಾನಗಳ ಜೀರ್ಣೋದ್ಧಾರ ವನ್ನು ಸಹ ಮಾಡಿದ್ದರು. ಇಂದು ಮಾತ್ರ ದೇವಸ್ಥಾನಗಳು 'ಸೆಕ್ಯುಲರ್'ವಾದಿ ರಾಜ್ಯವ್ಯವಸ್ಥೆಯ ಕೈವಶವಾಗಿರುವುದರಿಂದ ಸರಕಾರಿಕರಣ, ಭ್ರಷ್ಟಾಚಾರ, ಅಹಿಂದೂಗಳಿಗೆ ದೇವಸ್ಥಾನದಲ್ಲಿ ಪ್ರವೇಶ, ವಕ್ಫ್ ಬೋರ್ಡ್ ನಿಂದ ದೇವಸ್ಥಾನ ಭೂಮಿಯ ಅತಿಕ್ರಮಣ, ಹಣ ಪಡೆದು ವಿ.ಐ.ಪಿ. ದರ್ಶನ, ದೇವಸ್ಥಾನದ ಜಾಗ ಕಬಳಿಕೆ, ದೇವಾಲಯಗಳಲ್ಲಿ ಕಳ್ಳತನದ ಪ್ರಮಾಣಗಳು ಹೆಚ್ಚಾಗಿವೆ.

 

 ಇಂತಹ ಸಮಯದಲ್ಲಿ ದೇವಸ್ಥಾನ ಸಂಸ್ಕೃತಿಯ ರಕ್ಷಣೆ ಮಾಡುವುದು ಹಿಂದೂ ಸಮಾಜದ ಜವಾಬ್ದಾರಿಯಾಗಿರುತ್ತದೆ. ಆದ್ದರಿಂದ ದೇವಸ್ಥಾನದ ಸಮಸ್ಯೆ ನಿವಾರಣೆ ಮಾಡುವುದು, ದೇವಸ್ಥಾನದಲ್ಲಿ ಬರುವ ಭಕ್ತರಿಗಾಗಿ ಮೂಲ ಸೌಕರ್ಯ ಕಲ್ಪಿಸುವುದು ಹಾಗೂ ದೇವಸ್ಥಾನ ಪರಂಪರೆಯ ರಕ್ಷಣೆ ಮಾಡುವುದು ಇದಕ್ಕಾಗಿ ದೇವಸ್ಥಾನದ ವಿಶ್ವಸ್ಥರು, ಅರ್ಚಕರು, ಭಕ್ತರು ಮುಂತಾದವರ ಸಂಘಟನೆಗಳ ಅಗತ್ಯ ಅತೀ ಅವಶ್ಯಕವಾಗಿದೆ. ಅದಕ್ಕಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಜನವರಿ 4 ಮತ್ತು 5 2025 ರಂದು ಬೆಂಗಳೂರಿನ ಗಂಗಮ್ಮ ತಿಮ್ಮಯ್ಯ ಕನ್ವೆನ್ಷನ್ ಸೆಂಟರ್ ನಲ್ಲಿ ‘ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ’ದ ಆಯೋಜನೆ ಮಾಡಲಾಗಿದೆ.

 

 ಈ ಅಧಿವೇಶನದಲ್ಲಿ ರಾಜ್ಯದಾದ್ಯಂತದ 1000 ಕ್ಕೂ ಅಧಿಕ ದೇವಸ್ಥಾನ ವಿಶ್ವಸ್ಥರು, ಪ್ರತಿನಿಧಿಗಳು, ಪುರೋಹಿತರು, ದೇವಸ್ಥಾನದ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು ಮುಂತಾದವರು ಸಹಭಾಗಿಯಾಗಲಿದ್ದಾರೆ ಎಂದು 'ಕರ್ನಾಟಕ ಮಂದಿರ ಮಹಾಸಂಘ'ದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ ಇವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿರುತ್ತಾರೆ. ಈ ಪತ್ರಿಕಾಗೋಷ್ಠಿಯಲ್ಲಿ ಆರ್ಯವೈಶ್ಯ ಮಹಾಸಭಾದ ಅಧ್ಯಕ್ಷರಾದ ಆರ್ ಪಿ ರವಿಶಂಕರ, ವಕೀಲರಾದ ಹರ್ಷ ಮುತಾಲಿಕ, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಮತ್ತು ಪುರೋಹಿತ್ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷರಾದ ಡಾ. ರಾಘವೇಂದ್ರ ಭಟ್, ಶ್ರೀರಾಮ ಸೇವಾ ಮಂಡಳಿಯ ಅಧ್ಯಕ್ಷರಾದ ಕೆ ಎಸ್ ಶ್ರೀಧರ, ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕರಾದ ಶ್ರೀ. ಸುನೀಲ ಘನವಟ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಮುಂತಾದವರು ಉಪಸ್ಥಿತರಿದ್ದರು. 

 

 ಡಿಸೆಂಬರ್ 16, 2023 ರಲ್ಲಿ 'ಕರ್ನಾಟಕ ರಾಜ್ಯ ಪ್ರಥಮ ಮಂದಿರ ಅಧಿವೇಶನ’ ಬೆಂಗಳೂರಿನಲ್ಲಿ ನಡೆದಿತ್ತು. ಅದೇ ರೀತಿ ಗೋವಾ, ಮಹಾರಾಷ್ಟ್ರ ರಾಜ್ಯಗಳಲ್ಲಿಯೂ ಈ ಅಧಿವೇಶನಗಳು ನಡೆದಿವೆ. ಅದರ ನಂತರ ಮಹಾಸಂಘದ ಕಾರ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಎರಡು ವರ್ಷದಲ್ಲಿ ಸಂಪೂರ್ಣ ದೇಶದಾದ್ಯಂತ ತಲುಪುತ್ತಿದೆ. ಕರ್ನಾಟಕ ಮಂದಿರ ಮಹಾಸಂಘದ ಮಾಧ್ಯಮದಿಂದ ರಾಜ್ಯದ 250 ಕ್ಕೂ ಹೆಚ್ಚಿನ ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಲಾಗಿದೆ, ಹಾಗೂ 15 ಸಾವಿರಗಿಂತಲೂ ಹೆಚ್ಚಿನ ದೇವಸ್ಥಾನಗಳ ದೇಶಾದ್ಯಂತ ಸಂಘಟನೆಯಾಗಿದೆ ಎಂದು ಶ್ರೀ. ಮೋಹನ ಗೌಡ ಅವರು ಹೇಳಿದರು.

 

 ಈ ಅಧಿವೇಶನಕ್ಕೆ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಗಳು, ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಆಯುಕ್ತರಾದ ಶ್ರೀ. ನಂದಕುಮಾರ ಐಎಎಸ್, ಹಿರಿಯ ವಕೀಲರಾದ ಅರುಣ ಶ್ಯಾಮ್, ಪ್ರಮೀಳಾ ನೇಸರ್ಗಿ, ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ ಮುಂತಾದ ಗಣ್ಯರು ಸಹಭಾಗಿಯಾಗುವರು ಎಂದು ಶ್ರೀ. ಗುರುಪ್ರಸಾದ ಗೌಡ ಇವರು ಮಾತನಾಡಿದ ವೇಳೆಯಲ್ಲಿ ಹೇಳಿದರು.

 

ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕರಾದ ಶ್ರೀ. ಸುನೀಲ ಘನವಟ ಇವರು ಮಂದಿರ ಮಹಾಸಂಘವು ಪಂಚ ಸೂತ್ರದ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತದೆ. ಮಂದಿರ ವಿಶ್ವಸ್ಥರ ಸಂಘಟನೆ, ಸಮನ್ವಯ, ಮಂದಿರಗಳ ಸುವ್ಯವಸ್ಥಾಪನೆ, ಮಂದಿರಗಳ ಸುರಕ್ಷತೆ ಮತ್ತು ಮಂದಿರಗಳನ್ನು ಸನಾತನ ಧರ್ಮಪ್ರಚಾರದ ಕೇಂದ್ರಗಳನ್ನಾಗಿಸುವುದು. ರಾಮ ಮಂದಿರದ ನಿರ್ಮಾಣವಂತೂ ಆಯಿತು ಆದರೆ ಕಾಶಿ ಮಥುರಾದೊಂದಿಗೆ ಸಂಪೂರ್ಣ ದೇಶದ 4 ಲಕ್ಷಕಕ್ಕೂ ಅಧಿಕ ಮಂದಿರಗಳು ಸರಕಾರದ ನಿಯಂತ್ರಣದಲ್ಲಿದೆ. ಅವುಗಳನ್ನು ಮುಕ್ತಗೊಳಿಸಿ ಭಕ್ತರ ಕೈಗೊಪ್ಪಿಸುವ ಮುಖ್ಯ ಉದ್ದೇಶದೊಂದಿಗೆ ಮಂದಿರ ಮಹಾಸಂಘದ ಕಾರ್ಯ ಮಾಡುತ್ತಿದೆ ಎಂದು ಹೇಳಿದರು.

 

ಈ ಮಂದಿರ ಅಧಿವೇಶನದಲ್ಲಿ ಗಣ್ಯರ ಮಾರ್ಗದರ್ಶನ, ದೇವಸ್ಥಾನಕ್ಕೆ ಸಂಬಂಧಿತ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿದೆ ಎಂದೂ ಇದರಲ್ಲಿ ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸುವುದು, ಅಹಿಂದೂಗಳ ಪ್ರವೇಶವನ್ನು ನಿಷೇಧಿಸುವುದು, ದೇವಸ್ಥಾನಗಳನ್ನು ಸನಾತನ ಧರ್ಮಪ್ರಚಾರದ ಕೇಂದ್ರಗಳನ್ನಾಗಿ ಮಾಡುವುದು, ವಕ್ಫ್ ಕಾನೂನಿನ ಮೂಲಕ ದೇವಸ್ಥಾನಗಳ ಜಾಗದ ಅತಿಕ್ರಮಣ ಮತ್ತು ದೇವಸ್ಥಾನ ಭೂಕಬಳಿಕೆಯ ಕುರಿತು ಉಪಾಯ, ದೇವಸ್ಥಾನಗಳು ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯಮಾಂಸ ನಿಷೇಧ, ನಿರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ವಿಷಯಗಳ ಕುರಿತು ಚರ್ಚೆ ನಡೆಸಲಾಗುತ್ತದೆ. 

 

ಈ ಅಧಿವೇಶನವು ಕೇವಲ ಆಮಂತ್ರಿತರಿಗಾಗಿ ಇರುವುದರಿಂದ ಇದರಲ್ಲಿ ಸಹಭಾಗಿಯಾಗಲು ಇಚ್ಚಿಸುವವರು 7204082609 ಈ ಕ್ರಮಾಂಕಕ್ಕೆ ಸಂಪರ್ಕಿಸಬೇಕಾಗಿದೆ ಎಂದು ಮಂದಿರ ಮಹಾಸಂಘದಿಂದ ಕರೆ ನೀಡಲಾಗಿದೆ. 

 

ಜೊತೆಗೆ ನಾಡಿನ ಸಮಸ್ತ ಹಿಂದೂ ಬಾಂಧವರವರೆಗೆ ಈ ಅಧಿವೇಶನ ತಲುಪಿಸಲು Hindujagruti.org/Kannada ಈ ಜಾಲತಾಣದ ಮೂಲಕ ನೇರಪ್ರಸಾರವನ್ನೂ ಏರ್ಪಡಿಸಲಾಗಿದೆ.