ಪೆರ್ಲ: ಮಂಗಳೂರಿನ ಕನ್ನಡ ರಾಜ್ಯೋತ್ಸವ ಆಚರಣಾ ಸಮಿತಿ ಮತ್ತು ಕಲ್ಕೂರ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ನೀಡಲಾಗುವ ಪ್ರತಿಷ್ಠಿತ ಗಡಿನಾಡ ಸಾಧಕ ಪ್ರಶಸ್ತಿಯನ್ನು ಈ ಬಾರಿ ಯುವ ಯಕ್ಷ ಪ್ರತಿಭೆ ಸ್ಕಂದ ಸಿ.ಯಸ್.ಗೆ ಪ್ರದಾನ ಮಾಡಲಾಯಿತು. ಗಡಿನಾಡದ ಕಾಟುಕುಕ್ಕೆ ಗ್ರಾಮದ ನಿವಾಸಿಯಾದ ಸ್ಕಂದ, ಯಕ್ಷಗಾನದ ಮುಮ್ಮೇಳ ಹಾಗೂ ಹಿಮ್ಮೇಳಗಳಲ್ಲಿ ಸವ್ಯಸಾಚಿ.
ರಾಜ್ಯ ಪ್ರಶಸ್ತಿ ಪುರಸ್ಕೃತ ನಾಟ್ಯಗುರು ಸಬ್ಬಣಕೋಡಿ ರಾಮ ಭಟ್, ಯಕ್ಷಗಾನ ತರಬೇತುದಾರರು ತೆಂಕಬೈಲು ಮುರಳಿಕೃಷ್ಣ ಶಾಸ್ತ್ರಿ, ಹಾಗೂ ನಾರಾಯಣ ಶರ್ಮ ನೀರ್ಚಾಲು ಅವರಿಂದ ಹಿಮ್ಮೇಳ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾನೆ. ಶಿವಾನಂದ ಉಪ್ಪಳ ಅವರಿಂದ ತಬಲ ವಾದನ ಕಲೆಯನ್ನು ಅಭ್ಯಾಸಮಾಡುತಿದ್ದಾನೆ. ಯಕ್ಷಗಾನ ಪುಂಡು ವೇಷ ಕಿರೀಟ ವೇಷಗಳಲ್ಲಿ ಮಿಂಚುವ ಈತ 2023-24ನೇ ಸಾಲಿನ ಕೇರಳ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಯಕ್ಷಗಾನ ಸ್ಪರ್ಧೆಯಲ್ಲಿ ಎಗ್ರೇಡ್ ಪಡೆದು ಪ್ರಥಮ ಸ್ಥಾನಗಳಿಸುವ ಮೂಲಕ ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ಶಾಲೆಯ ಪಠ್ಯೇತರ ಚಟುವಟಿಕೆಗಳಾದ ವಿಜ್ಞಾನ ಶಾಸ್ತ್ರ ಮೇಳ, ರಸಪ್ರಶ್ನೆ, ಚಿತ್ರಕಲೆ ಹೀಗೆ ಬಹುಮುಖಿ ಪ್ರತಿಭಾ ರಂಗದಲ್ಲಿ ತೊಡಗಿಸಿಕೊಂಡಿರುವ ಸ್ಕಂದ ಸಿ.ಯಸ್ ಗೆ ಕನ್ನಡ ರಾಜ್ಯೋತ್ಸವದಂಗವಾಗಿ ಮಂಗಳೂರು ಕೊಡಿಯಲ್ ಬೈಲ್ನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆದ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನಿಸಲಾಯಿತು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ನಿಟ್ಟೆ ಯೂನಿವರ್ಸಿಟಿ ಯ ಡಾ.ಶಾಂತರಾಮ ಶೆಟ್ಟಿ, ಪ್ರೋ.ಎಂ.ಬಿ.ಪುರಾಣಿಕ್, ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಆಕಾಶವಾಣಿ ಗುಲ್ಬರ್ಗ ವಿಭಾಗದ ಕಾರ್ಯನಿರ್ವಹಣಾ ಅಧಿಕಾರಿ ಡಾ.ಸದಾನಂದ ಪೆರ್ಲ, ಮತ್ತು ನಾಟ್ಯ ವಿದುಷಿ ಕಮಲ ಭಟ್ ಚಂದ್ರಹಾಸ ಮಾಸ್ಟರ್ ಸಹನಾ ಅರೆಕ್ಕಾಡಿ ಮೊದಲಾದ ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸ್ಕಂದ ಸಿ.ಯಸ್ ಗೆ ಶುಭಹಾರೈಸಿದರು.