ಆರೋಗ್ಯ ಸೇವೆಯ ಹರಿಕಾರಿಣಿ ಆಶಾ ಹೆಗ್ಡೆ ಮಂದಾರ್ತಿ ಬ್ರಹ್ಮಾವರ ತಾಲೂಕಿನ ತುಳುವ ಮಹಾಸಭೆಯ ನೂತನ ಸಂಚಾಲಕಿಯಾಗಿ ನೇಮಕ!

  • 07 Jul 2025 02:47:03 PM


ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಂದಾರ್ತಿ ನೀರ್ಜೆಡ್ಡು ಮೂಲದ ಸಮಾಜ ಸೇವಕಿ ಶ್ರೀಮತಿ ಆಶಾ ಎ. ಹೆಗ್ಡೆ ಮಂದಾರ್ತಿ ಅವರನ್ನು ಬ್ರಹ್ಮಾವರ ತಾಲೂಕಿನ ತುಳುವ ಮಹಾಸಭೆಯ ಸಂಚಾಲಕಿಯಾಗಿ ನೇಮಕ ಮಾಡಲಾಗಿದೆ.

 

ಭಂಡಾರ್ಕರ್ಸ್ ಕಾಲೇಜಿನಲ್ಲಿ ಪದವಿ ಹಾಗೂ ಡಿ.ಎಂ.ಎಲ್.ಟಿ (DMLT) ಪೂರೈಸಿರುವ ಆಶಾ ಹೆಗ್ಡೆ ಅವರು, ಆರೋಗ್ಯ ಕ್ಷೇತ್ರದಲ್ಲಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದವರು. 

 

ಶ್ರೀದೇವಿ ಕ್ಲಿನಿಕಲ್ ಲ್ಯಾಬೋರೇಟರಿ (ಸಾಲಿಗ್ರಾಮ), ಶ್ರೀದೇವಿ ಹೆಲ್ತ್ ಕೇರ್ (ಮಂದಾರ್ತಿ) ಹಾಗೂ ಪ್ರಧಾನಮಂತ್ರಿ ಜನೌಷಧಿ ಕೇಂದ್ರ (ಮಂದಾರ್ತಿ) ಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 

ಅವರಲ್ಲಿನ ಗಮನಾರ್ಹವಾದ ಅಂಶವೇನೆಂದರೆ, ಆರೋಗ್ಯ ಸೇವೆಯ ಜೊತೆಗೆ ಸಮಾಜಮುಖಿ ಸೇವೆಯನ್ನೂ ಸಮರ್ಪಣೆಯಿಂದ ನಿರ್ವಹಿಸುತ್ತಿರುವುದು. ಅವರು ಮಾನವ ಹಕ್ಕುಗಳು ಮತ್ತು ಮಹಿಳಾ–ಮಕ್ಕಳ ಕಲ್ಯಾಣ ಸಂಸ್ಥೆಯ ಕರ್ನಾಟಕ ಉಪಾಧ್ಯಕ್ಷೆ, ಸಹಕಾರ ಭಾರತಿಯ ಉಡುಪಿ ಜಿಲ್ಲಾ ಮಹಿಳಾ ಪ್ರಮುಖೆ, ಸನ್ನಿಧಿ ಮಹಿಳಾ ಸೌಹಾರ್ದ ಸಹಕಾರಿ ಸಂಸ್ಥೆಯ ನಿರ್ದೇಶಕಿ, ದೇವಸ್ಥಾನಗಳ ಸದಸ್ಯೆ, ಮತ್ತು ಗಣೇಶೋತ್ಸವದ ಗೌರವ ಸಲಹೆಗಾರೆಯಾಗಿ ಸೇವೆ ಸಲ್ಲಿಸಿದ್ದಾರೆ. 

 

ಜೊತೆಗೆ ಜೀವ ವಿಮಾ ಕಂಪನಿಗಳ ಅನುಮೋದಿತ ವಿಮಾ ಏಜೆಂಟ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

 

ಅದ್ಭುತ ಶ್ರಮ, ಸಾಮರ್ಥ್ಯ ಮತ್ತು ಬದ್ಧತೆಯೊಂದಿಗೆ ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಆಶಾ ಹೆಗ್ಡೆ, ತುಳು ಭಾಷೆ, ಸಂಸ್ಕೃತಿ ಹಾಗೂ ತಾಯ್ನಾಡಿಗೆ ಸೇವೆಯ ಉದ್ದೇಶದೊಂದಿಗೆ ಮಹಾಸಭೆಯ ಈ ನೂತನ ಹೊಣೆಗಾರಿಕೆಗೆ ಆಯ್ಕೆಯಾಗಿರುತ್ತಾರೆ.

 

1928 ರಲ್ಲಿ ಹಿರಿಯ ತಿಲಕವಾದಿ ಎಸ್. ಯು. ಪಣಿಯಾಡಿ ನೇತೃತ್ವದಲ್ಲಿ ಸ್ಥಾಪಿತವಾದ ತುಳುವ ಮಹಾಸಭೆ, ತನ್ನ ಶತಮಾನೋತ್ಸವದ ಹಾದಿಯಲ್ಲಿ, ನಶಿಸುತ್ತಿರುವ ತುಳು ಪರಂಪರೆಗಳ ಪುನರುಜ್ಜೀವನ, ತುಳುನಾಡನ್ ಕಳರಿ ತರಬೇತಿ, ದೈವ ಆರಾಧನೆ, ಭಾಷಾ–ಮತ–ಜಾತಿ ಸೌಹಾರ್ದತೆ ಮತ್ತು ಪರಿಸರ ಸಂರಕ್ಷಣೆಯಂತಹ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದೆ.

 

ಬ್ರಹ್ಮಾವರ ತಾಲೂಕಿನಲ್ಲಿ ಆಶಾ ಹೆಗ್ಡೆಯವರ ನೇತೃತ್ವದಲ್ಲಿ ತುಳು ಭಾಷಾ ಬೋಧನೆ, ಸಾಂಸ್ಕೃತಿಕ ಚಟುವಟಿಕೆಗಳ ಬೆಳವಣಿಗೆ ಮತ್ತು ಸಮುದಾಯದ ಸಂಘಟಿತ ಬಲವರ್ಧನೆಗೆ ನಿರೀಕ್ಷಿತ ರೂಪಾಂತರಗಳು ಸಾಧ್ಯವಿದೆ ಎಂಬ ವಿಶ್ವಾಸವನ್ನು ಕೇಂದ್ರ ಮಹಾಸಭೆ ವ್ಯಕ್ತಪಡಿಸಿದೆ.

 

 ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ತುಳು ಸಂಘಟನೆಗಳಿಂದ ಆಶಾ ಹೆಗ್ಡೆಯವರಿಗೆ ಅಭಿನಂದನೆಗಳು ಹರಿದು ಬರುತ್ತಿವೆ.