ವಿಶ್ವನಾಥನ್ ಆನಂದ್ ನಂತರ ಗುಕೇಶ್: ಚೆಸ್ ತೇಜಸ್ಸಿಗೆ ಭಾರತದ ಮತ್ತೊಂದು ಹೆಜ್ಜೆ!

  • 14 Dec 2024 06:15:36 PM

ಸಿಂಗಾಪುರ್: ವಿಶ್ವ ಚೆಸ್ ಚಾಂಪಿಯನ್‌ ಶಿಪ್‌ 2024 ನಲ್ಲಿ ಚೀನಾದ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿ, ಭಾರತೀಯ ಯುವ ಆಟಗಾರ ಗುಕೇಶ್ ದೊಮ್ಮರಾಜು ಜಗತ್ತಿನ ಪ್ರಬಲ ಚೆಸ್ ಚಾಂಪಿಯನ್ ಆಗಿದ್ದಾರೆ.

 

ವಿಶ್ವನಾಥನ್ ಆನಂದ್‌ ನಂತರ ವಿಶ್ವ ಚೆಸ್ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡ ಎರಡನೇ ಭಾರತೀಯ ಎಂಬ ಪಟ್ಟ 18 ವರ್ಷದ ಗ್ರ್ಯಾಂಡ್ ಮಾಸ್ಟರ್ ಡಿ. ಗುಕೇಶ್‌ ಅವರದ್ದಾಗಿದೆ. 

 

 ಚೆಸ್ ನ ಇತಿಹಾಸದಲ್ಲಿಯೇ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಎಂಬ ಬಿರುದಿಗೆ ಡಿ. ಗುಕೇಶ್‌ರವರು ಪಾತ್ರರಾಗಿದ್ದಾರೆ.

 

ಚೆನ್ನೈನಲ್ಲಿ 2006ರ ಮೇ 29ರಂದು ಜನಿಸಿದ ಗುಕೇಶ್, ತನ್ನ ಕೇವಲ 7ನೇ ವಯಸ್ಸಿನಲ್ಲಿಯೇ ಚೆಸ್ ಆಟ ಪ್ರಾರಂಭಿಸಿದ್ದರು. ಅವರ ಈ ಸಾಧನೆಯ ಹಿಂದೆ ಅವರ ನಿರಂತರ ಶ್ರಮ, ತಾಳ್ಮೆ, ಮತ್ತು ಅಭ್ಯಾಸವು ಅಡಗಿಕೊಂಡಿದೆ.

 

*ಇದು ನಾನು 10 ವರ್ಷಗಳಿಂದ ಕಂಡ ಕನಸಾಗಿತ್ತು. ನಾನು 6 ಅಥವಾ 7ನೇ ವಯಸ್ಸಿನಿಂದಲೇ ಈ ಕ್ಷಣದ ಕನಸನ್ನು ಕಾಣುತ್ತಿದ್ದೆ. ಈಗ ಆ ಕನಸು ನನಸಾಗಿದೆ. ಅದಕ್ಕಾಗಿ ನಾನು ದೇವರಿಗೆ ಧನ್ಯವಾದ ಹೇಳುತ್ತೇನೆ ಎಂದು ಭಾವೋದ್ವಿಗಿತರಾಗಿ ಸಿಂಗಾಪುರ್ ನ ಚಾಂಪಿಯನ್ಶಿಪ್ ನ ಗೆಲುವಿನ ನಂತರ ಹೇಳಿದರು.

 

ಗುಕೇಶ್ ಅವರ ಈ ಅಸಾಧಾರಣ ಸಾಧನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತದ ಚೆಸ್ ಅಭಿಮಾನಿಗಳಿಗೂ ಇದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ!