ಮಂಗಳೂರು: ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಎಲ್ಲಾ ಮಾದರಿಯ ಅಂತರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅವರ ಬದಲು ಭಾರತೀಯ ಕ್ರಿಕೆಟ್ ತಂಡಕ್ಕೆ ಮಂಗಳೂರು ಮೂಲದ ಯುವಕನೋರ್ವ ಸೇರ್ಪಡೆಯಾಗಿರೋದು ಕರಾವಳಿಗರಿಗೆ ಹೆಮ್ಮೆಯ ಮತ್ತು ಸಂತೋಷದ ವಿಚಾರವಾಗಿದೆ.
ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡಲಿರುವ ತನುಷ್ ಕೋಟ್ಯಾನ್..!!
ಹೌದು. ನಿವೃತ್ತಿ ಹೊಂದಿದ ಆರ್.ಅಶ್ವಿನ್ ಬದಲಿಗೆ ಮಂಗಳೂರು ಮೂಲದ, ಮುಂಬೈಯ ಬಲಗೈ ಆಫ್ ಸ್ಪಿನ್ನರ್ ತನುಷ್ ಕೋಟ್ಯಾನ್ ಅತೀ ಶೀಘ್ರವಾಗಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಬಾರ್ಡರ್- ಗಾವಸ್ಕರ್ ಟೆಸ್ಟ್ ಸರಣಿಯಲ್ಲಿ ಇಪ್ಪತ್ತಾರು ವರ್ಷದ ಕೋಟ್ಯಾನ್ ಅವರು ಸುಂದರ್ ಮತ್ತು ರವೀಂದ್ರ ಜಡೇಜ ಗಾಯಗೊಂಡರೆ ಆಡುವ ಅವಕಾಶವನ್ನು ಪಡೆಯಲಿದ್ದಾರೆ.
ಇಂಡಿಯಾ ಎ ತಂಡದ ಆಸ್ಟ್ರೇಲಿಯಾ ಪ್ರವಾಸದ ಭಾಗವಾಗಿದ್ದ ಈತ ಇದೀಗ ಅಂತರಾಷ್ಟ್ರೀಯ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುವ ಉತ್ಸಾಹದಲ್ಲಿದ್ದಾರೆ.
ಖುಷಿಯನ್ನು ವಿವರಿಸಲು ಮಾತೇ ಬರುತ್ತಿಲ್ಲ- ತನುಷ್ ತಂದೆ ಭಾವುಕ ಮಾತು..
ಉಡುಪಿ ಜಿಲ್ಲೆಯ ಕಾಪು ಪಾಂಗಾಳದವರಾದ ತನುಷ್ ಕರುಣಾಕರ್ ಕೋಟ್ಯಾನ್ ಅವರ ಪುತ್ರ. ಮಗ ಭಾರತ ತಂಡಕ್ಕೆ ಆಯ್ಕೆಯಾದ ಬಗ್ಗೆ ಅವರು ಸಂತೋಷವನ್ನು ವ್ಯಕ್ತಪಡಿಸಿ ` ಮಗ ಆಯ್ಕೆಯಾಗಿದ್ದು ಅತ್ಯಂತ ಖುಷಿಯಾಗಿದೆ. ಇದನ್ನು ಊಹಿಸಿಯೂ ಇರಲಿಲ್ಲ.
ಅವನಿಗೆ ದೈವ ದೇವರ ಮೇಲೆ ನಂಬಿಕೆ ಜಾಸ್ತಿ. ತನುಷ್ ಅಹಮದಾಬಾದ್ ನಲ್ಲಿ ವಿಜಯ್ ಹಜಾರೆ ಕೂಟದಲ್ಲಿ ಆಡುತ್ತಿದ್ದಾನೆ. ಆತನಿಗೆ ಆಸ್ಟ್ರೇಲಿಯಾ ವಿರುದ್ಧ ಈ ಸರಣಿಯಲ್ಲೇ ಟೆಸ್ಟ್ ಆಡುವ ಅವಕಾಶ ಸಿಗಲಿ. ನಂಬಿದ ದೈವ- ದೇವರುಗಳು ಅವನ ಕೈ ಹಿಡಿಯಲಿ' ಎಂದು ಶುಭ ಹಾರೈಸಿದ್ದಾರೆ.