ದುಬೈ: ಭಾರತ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿದೆ. ಟೀಂ ಇಂಡಿಯಾ ಕ್ರಿಕೆಟ್ ಪ್ರಿಯರಿಗಂತೂ ಹರ್ಷೋದ್ಗಾರದ ಔತಣವನ್ನೇ ಉಣಬಡಿಸಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ರೋಚಕ ಜಯ ಸಾಧಿಸುವ ಮೂಲಕ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ವಿಶ್ವದ ಅತೀ ಎತ್ತರ ಕಟ್ಟಡವಾದ ಬುರ್ಜ್ ಖಲೀಫಾದಲ್ಲಿ ಭಾರತದ ತ್ರಿವರ್ಣ ಧ್ವಜ ರಾರಾಜಿಸಿದೆ.
ಮೂರನೇ ಬಾರಿಗೆ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡ ಭಾರತ....!!
ಭಾನುವಾರ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ 3ನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಕಿರೀಟ ಮುಡಿಗೇರಿಸಿಕೊಂಡಿದೆ.
2024ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ಭಾರತಕ್ಕಿದು ಸತತ 2ನೇ ಐಸಿಸಿ ಟ್ರೋಫಿ ಆಗಿರೋದು ವಿಶೇಷ ಮತ್ತು ಹೆಮ್ಮೆ ತರುವ ವಿಚಾರವಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟವಾಗಿ 251 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಭಾರತ ಗೆಲ್ಲಲೇಬೇಕು ಎಂಬ ಹಠದಿಂದ 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ವಿನ್ ಆಯಿತು.
ಟೀಂ ಇಂಡಿಯಾಗೆ ಸಿಕ್ಕಿದ್ದು ಎಷ್ಟು ಕೋಟಿ ರೂಪಾಯಿ ಗೊತ್ತಾ...?
ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ ಚಾಂಪಿಯನ್ಸ್ ಪಂದ್ಯವನ್ನು ಗೆದ್ದು ಒಟ್ಟು 20 ಕೋಟಿ ರೂಪಾಯಿ ಬಹುಮಾನ ಪಡೆದಿದೆ. ನ್ಯೂಜಿಲೆಂಡ್ ತಂಡಕ್ಕೆ 9.74 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಸೆಮಿಫೈನಲ್‌ನಲ್ಲಿ ಸೋತ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಕ್ಕೆ ತಲಾ 4.87 ಕೋಟಿ ರೂಪಾಯಿ ಸಿಕ್ಕಿದೆ.
ಟೀಂ ಇಂಡಿಯಾ ಆಟಗಾರರು ಗೆದ್ದಿದಕ್ಕೆ ಮತ್ತು ಇಷ್ಟು ಕೋಟಿ ರೂ. ಬಹುಮಾನವನ್ನು ಪಡೆದಿದ್ದಕ್ಕೆ ಅತ್ಯಂತ ಸಂಭ್ರಮದಲ್ಲಿದ್ದಾರೆ. ಈ ಸಂಭ್ರಮ, ಖುಷಿಯ ನಡುವೆ ಕೊಹ್ಲಿ ಶಮಿ ಅವರ ತಾಯಿಯನ್ನು ಮೈದಾನದಲ್ಲೇ ಭೇಟಿಯಾದರು. ಕೊಹ್ಲಿ ಭಾವುಕರಾಗಿ ಶಮಿ ಅವರ ತಾಯಿಯ ಬಳಿಗೆ ಬಂದು ಗೌರವದಿಂದ ಅವರ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದರು. ಶಮಿ ತಾಯಿ ಕೂಡ ಕೊಹ್ಲಿ ತಲೆ ಮುಟ್ಟಿ ಪ್ರೀತಿಯಿಂದ ಆಶೀರ್ವದಿಸಿದ್ದಾರೆ. ಈ ಭಾವುಕ ಕ್ಷಣದ ವೀಡಿಯೋ ವೈರಲ್ ಆಗಿದ್ದು ಕೊಹ್ಲಿಯ ವಿನಯತೆಯನ್ನು ಜನ ಹೊಗಳಿದ್ದಾರೆ.