ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯನ್ನು "ಮಂಗಳೂರು ಜಿಲ್ಲೆ" ಎಂದು ಮರುನಾಮಕರಣ ಮಾಡುವುದು ಅತ್ಯಂತ ಅವಶ್ಯಕವಾಗಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪ್ಪಾಡಿ ಹೇಳಿದ್ದಾರೆ.
ತುಳುನಾಡಿನ ಧಾರ್ಮಿಕ, ಸಾಂಸ್ಕೃತಿಕ ಮತ್ತು ಭಾಷಾ ವೈವಿಧ್ಯತೆಯುಳ್ಳ ಈ ಜಿಲ್ಲೆಗೆ ಅದರ ಕೇಂದ್ರದ ಹೆಸರಾದ "ಮಂಗಳೂರು" ಎಂಬ ಹೆಸರು ಶ್ರೇಷ್ಠವಾದುದರಿಂದ ಮರುನಾಮಕರಣ ಅನಿವಾರ್ಯವಾದುದು ಎಂದು ಅವರು ತಿಳಿಸಿದ್ದಾರೆ.
“ಇದು ತುಳುನಾಡಿನ ಜನರ ಅಸ್ತಿತ್ವದ ವಿಚಾರವಾಗಿದೆ. ಮರುನಾಮಕರಣಕ್ಕೆ ಜನತೆ ಒಗ್ಗಟ್ಟಾಗಿ, ಒಕ್ಕೊರಲಿನಿಂದ ಧ್ವನಿ ಎತ್ತಬೇಕು. ಜಿಲ್ಲೆಗೆ ಮಂಗಳಕರವಾದ ಮಂಗಳೂರು ಹೆಸರು ಅತ್ಯಂತ ಸಮಂಜಸವಾದದ್ದು ಎಂದೂ ಇದು ನಮ್ಮ ಧರ್ಮ, ಸಂಸ್ಕೃತಿ ಮತ್ತು ಇತಿಹಾಸದ ಪ್ರತಿಬಿಂಬವಾಗಿದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಅವರು ತುಳು ಭಾಷೆಗೆ ಸಂವಿಧಾನಬದ್ಧ ಮಾನ್ಯತೆ ದೊರಕಿಸುವ ಅವಶ್ಯಕತೆಯನ್ನೂ ಒತ್ತಿಹೇಳಿದರು.
ತುಳು ಭಾಷೆಗೆ ಮಾನ್ಯತೆ ದೊರೆತರೆ ಮಾತ್ರ ನಮ್ಮ ಸಂಸ್ಕೃತಿಯ ಉಳಿವು ಹಾಗೂ ಭಾಷಾ ಗೌರವ ಕಾಪಾಡಲು ಸಾಧ್ಯ. ಇದು ರಾಜಕೀಯವಲ್ಲ, ನಾಡಿನ ಗೌರವಕ್ಕಾಗಿ ನಡೆಯುವ ಹೋರಾಟವಾಗಿದೆ. ಎಲ್ಲರೂ ಒಂದಾಗಿ ಇದಕ್ಕಾಗಿ ಪ್ರಬಲವಾಗಿ ಹೋರಾಟ ನಡೆಸಬೇಕು,” ಎಂದು ರಾಜೇಶ್ ನ್ಯಾಕ್ ಉಳಿಪ್ಪಾಡಿ ಹೇಳಿದರು.