ಉಪ್ಪಳದ ಜೋಡುಕಲ್ಲಿನ ಮನೆಯಲ್ಲಿ ಕಳ್ಳತನಕ್ಕೆ ಯತ್ನ – ಪೊಲೀಸರ ತ್ವರಿತ ಕಾರ್ಯಚರಣೆಯಲ್ಲಿ ಆರೋಪಿ ಬಂಧನ!

  • 05 Jul 2025 07:53:20 PM


ಉಪ್ಪಳ: ರಾತ್ರಿಯ ವೇಳೆ ಮನೆಯವರು ನಿದ್ರೆಮಗ್ನರಾಗಿದ್ದ ಸಮಯದಲ್ಲಿ ಕಳ್ಳನೊಬ್ಬ ಬಾಗಿಲು ಮುರಿದು ಒಳಗೆ ನುಗ್ಗಿ ಕಳವಿಗೆ ಯತ್ನಿಸಿದ ಘಟನೆ ಶನಿವಾರ ಮುಂಜಾನೆ ಉಪ್ಪಳ ಸಮೀಪದ ಜೋಡುಕಲ್ಲು ಪ್ರದೇಶದಲ್ಲಿ ನಡೆದಿದೆ.

 

 ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ತ್ವರಿತ ಕಾರ್ಯಾಚರಣೆಯಲ್ಲಿ ಮಂಜೇಶ್ವರ ಠಾಣಾ ಪೊಲೀಸರು ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

ಬಂಧಿತನನ್ನು ಜೋಡುಕಲ್ಲು ಶಾಂತಿಯೋಡಿನ ನಿವಾಸಿ ಕಲಂದರ್ ಶಾಫಿ (34) ಎಂದು ಗುರುತಿಸಲಾಗಿದೆ.

 

ಕಳ್ಳತನ ಯತ್ನವು ಬೇಕೂರು ಕನ್ನಾಟಿಪಾರೆಯ ಹರೀಶ್ ಎಂಬವರ ಮನೆಯಲ್ಲಿ ಸಂಭವಿಸಿದ್ದು, ಮುಂಜಾನೆ ಸುಮಾರು 3 ಗಂಟೆಯ ಸುಮಾರಿಗೆ ಬಾಗಿಲು ಮುರಿದು ಒಳನುಗ್ಗಿದ ಆರೋಪಿ ಶಬ್ದ ಕೇಳಿ ಎಚ್ಚೆತ್ತ ಮನೆಯವರು ಬೊಬ್ಬೆ ಹಾಕಿದಾಗ ತಕ್ಷಣವೇ ಪರಾರಿಯಾಗಿದ್ದಾನೆ.

 

ಪರಾರಿಯಾಗುವಾಗ ಆರೋಪಿ ಆಟೋ ರಿಕ್ಷಾವೊಂದರಲ್ಲಿ ತೆರಳುತ್ತಿದ್ದ ದೃಶ್ಯವನ್ನು ಮನೆಯವರು ಗಮನಿಸಿದ್ದು, ಕೂಡಲೇ ಮಂಜೇಶ್ವರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 

 ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯ ಗುರುತನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ

 

ಬಂಧಿತ ಕಲಂದರ್ ಶಾಫಿ ವಿರುದ್ಧ 2021ರಲ್ಲಿ ಐದು ಕಿಲೋ ಗಾಂಜಾ ವಶಪಡಿಸಿಕೊಂಡ ಪ್ರಕರಣವೂ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಮಂಜೇಶ್ವರ ಪೊಲೀಸರ ಶ್ಲಾಘನೀಯ ಕಾರ್ಯಚರಣೆ ಮೂಲಕ ಕಳ್ಳತನದ ಯತ್ನವನ್ನು ವಿಫಲಗಗೊಂಡಿದ್ದು ಸಾರ್ವಜನಿಕರಿಂದ ಪ್ರಶಂಸೆ ಪಡೆದುಕೊಂಡಿದ್ದಾರೆ.