ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ: ಕೊಳಲಗಿರಿ ಯುವಕನ ವಿರುದ್ಧ ಉಡುಪಿಯಲ್ಲಿ ಕೇಸ್, ಬಂಧನ

  • 06 Jul 2025 02:58:52 PM


ಉಡುಪಿ: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಕೊಳಲಗಿರಿಯ ಯುವಕನೊಬ್ಬನನ್ನು ಉಡುಪಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

 

 ಬಂಧಿತನನ್ನು ನರ್ನಾಡುಗುಡ್ಡೆ, ಲಕ್ಷ್ಮೀನಗರ, ಕೊಳಲಗಿರಿ ನಿವಾಸಿ ಸಂಜಯ್ ಕರ್ಕೇರ (28) ಎಂದು ಗುರುತಿಸಲಾಗಿದೆ.

 

ಸಂತ್ರಸ್ತೆಯ ದೂರಿನ ಪ್ರಕಾರ, ಆರೋಪಿಯೊಂದಿಗೆ ಕಳೆದ ಎರಡು ವರುಷಗಳಿಂದ ಅವರು ಪ್ರೀತಿಸುತ್ತಿದ್ದೆಂದೂ ಯುವತಿ, 2024ರ ಜುಲೈ 11ರಂದು ಟ್ರಕ್ಕಿಂಗ್‌ಗಾಗಿ ಜೊತೆಗೆ ಕಳಸಕ್ಕೆ ತೆರಳಿದ್ದು , ಟ್ರಕ್ಕಿಂಗ್ ನಂತರ ಆರೋಪಿ ಜ್ಯೂಸ್‌ ನೀಡಿದ್ದಾನೆಂದು ಅದನ್ನು ಸೇವಿಸಿದ ನಂತರ ಆಕೆ ಅರೆಪ್ರಜ್ಞಾವಸ್ಥೆಗೆ ತಲುಪಿದ ಸಂದರ್ಭವನ್ನು ಬಳಸಿಕೊಂಡು ಆರೋಪಿಯು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

 

ಘಟನೆ ಬಳಿಕ ಯುವಕನು ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಶೃಂಗೇರಿ ದೇವಾಲಯಕ್ಕೆ ಕರೆದೊಯ್ದು, ಸಿಂಧೂರವಿಟ್ಟು, ಹೂವಿನ ಹಾರ ಹಾಕಿ ಮದುವೆಯಾದಂತೆ ನಾಟಕವಾಡಿದ ಜೊತೆಗೆ ಕುಟುಂಬದ ಒಪ್ಪಿಗೆ ಪಡೆದು ಶೀಘ್ರದಲ್ಲೇ ಅಧಿಕೃತವಾಗಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ ಎಂದು ತಿಳಿಸಿದ್ದಾಳೆ.

 

ಈ ನಂಬಿಕೆಯಲ್ಲಿ ಸಂತ್ರಸ್ತೆಯ ಮೇಲೆ ಹಲವಾರು ಬಾರಿ ದೌರ್ಜನ್ಯ ವೆಸಗಿರುವುದಾಗಿ ಹೇಳಿದ್ದಾಳೆ.

 

 

ಆದರೆ, ನಂತರ ಆರೋಪಿ ಮತ್ತೊಬ್ಬ ಯುವತಿಯೊಂದಿಗೆ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದ ಮಾಹಿತಿ ಸಂತ್ರಸ್ತೆಗೆ ಲಭಿಸಿದ ಹಿನ್ನೆಲೆಯಲ್ಲಿ ಆಕೆ ಪೊಲೀಸರಿಗೆ ದೂರು ನೀಡಿದ್ದಳು.

 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಮಹಿಳಾ ಠಾಣೆ ಪೊಲೀಸರು ಸಂಜಯ್ ಕರ್ಕೇರನನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. 

 

ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಲಭ್ಯವಾದಂತೆ ವರದಿ ನವೀಕರಿಸಲಾಗುವುದು.