ಪುತ್ತೂರು|ಬಾವಿಗೆ ಬಿದ್ದ ಮಾರ್ಜಾಲ..! ರಕ್ಷಣೆಗೆ ಮುಂದಾದ ಅಗ್ನಿಶಾಮಕ ಸಿಬ್ಬಂದಿಯ ಕೈ ಕಚ್ಚಿ ಗಾಯ ಮಾಡಿದ ಬೆಕ್ಕು...

  • 29 Jan 2025 12:34:44 PM

ರಿಪಬ್ಲಿಕ್ ಹಿಂದೂ:- ಯಾವುದೇ ಮನೆಯಲ್ಲಿ ಏನಾದರೊಂದು ಅಗ್ನಿ ದುರಂತ ಸಂಭವಿಸಿದರೆ ಅಥವಾ ಏನಾದರೊಂದು ಸಮಸ್ಯೆ ಎದುರಾದಲ್ಲಿ ನಮಗೆ ತಕ್ಷಣ ನೆನಪಾಗೋದೇ ಅಗ್ನಿಶಾಮಕ ದಳದವರು. ಆಪತ್ತಿನ ಕಾಲದಲ್ಲಿ ಸಹಾಯಕ್ಕೆ ಬರುವ ಇವರ ಕಾರ್ಯವನ್ನು ಶ್ಲಾಘಿಸಲೇಬೇಕು. ಆದರೆ ಅವಘಡಗಳಿಂದ ಪಾರು ಮಾಡುವ ಸಂದರ್ಭದಲ್ಲಿ ಇವರಿಗೇ ಅಪಾಯವಾದರೆ ಹೇಗೆ..? ಇಂತಹ ಘಟನೆಯೊಂದು ಪುತ್ತೂರಿನಲ್ಲಿ ನಡೆದಿದೆ.

 

ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಹೋದ ಸಿಬ್ಬಂದಿ, ಕಚ್ಚಿ ಗಾಯ ಮಾಡಿದ ಕ್ಯಾಟ್..!!

 

ಬಾವಿಗೆ ಬಿದ್ದ ಬೆಕ್ಕನ್ನು ಬಚಾವು ಮಾಡಲು ಹೋದ ಅಗ್ನಿಶಾಮಕ ದಳದ ಸಿಬ್ಬಂದಿಗೆ ಬೆಕ್ಕು ಕಚ್ಚಿ ಗಂಭೀರವಾಗಿ ಗಾಯ ಮಾಡಿದ ವಿಲಕ್ಷಣ ಘಟನೆ ಪುತ್ತೂರಿನ ತೆಂಕಿಲ ಕ್ರಾಸ್ ಬಳಿ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ಸಿದ್ಧರೂಢ ಮತ್ತು ಮೌನೇಶ್ ಗಾಯಗೊಂಡವರಾಗಿದ್ದಾರೆ. ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸಲು ಬಂದ ಇವರನ್ನು ಬೆಕ್ಕು ತಪ್ಪಾಗಿ ತಿಳಿದು ಭಯಭೀತಗೊಂಡು ದಾಳಿ ನಡೆಸಿದೆ. ಐದು ನಿಮಿಷ ಹೆಚ್ಚು ಕಾಲ ಈ ಬೆಕ್ಕು ಸಿಬ್ಬಂದಿಯ ಕೈಯನ್ನು ಗಟ್ಟಿಯಾಗಿ ಕಚ್ಚಿದೆ. ಎಷ್ಟೇ ಹರಸಾಹಸ ಪಟ್ಟರೂ ಸಿಬ್ಬಂದಿಗೆ ಬೆಕ್ಕಿನ ಕೈಯಿಂದ ತಪ್ಪಿಸಿಕೊಳ್ಳಲಾಗದೆ ಗಂಭೀರವಾಗಿ ಗಾಯಗೊಂಡಿದ್ದಾರೆ.‌ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ.

 

ಏನಿದು ಪ್ರಕರಣ..?

 

ಪುತ್ತೂರಿನ ತೆಂಕಿಲ ಬಳಿಯ ಲಕ್ಷ್ಮಿ ಎಂಬವರ ಮನೆಯ ಬಾವಿಗೆ ಬೆಕ್ಕೊಂದು ಬಿದ್ದಿತ್ತು. ಮನೆಯವರಿಗೆ ಇದನ್ನು ಆಚೆ ತೆಗೆಯಲು ಆಗದೆ ಇದ್ದಾಗ ಮನೆಯವರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಕರೆ ಮಾಡಿ ತಿಳಿಸಿದ್ದಾರೆ. ತಕ್ಷಣವೇ ಮನೆಗೆ ಬಂದ ಅವರಲ್ಲಿ ಓರ್ವ ಸಿಬ್ಬಂದಿ ಬಾವಿಗಿಳಿದು ಭಯದಿಂದ ಬಿಲದೊಳಗೆ ಅವಿತು ಕೂತಿದ್ದ ಬೆಕ್ಕನ್ನು ಬಚಾವು ಮಾಡಲು ಹೋಗಿದ್ದಾರೆ. ಆಗ ಭಯಗೊಂಡು ಅದು ಅವರ ಮೇಲೆರಗಿ ಕಚ್ಚಿ ಗಾಯ ಮಾಡಿದೆ. ಇಬ್ಬರು ಸಿಬ್ಬಂದಿ ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.